ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ಸಾವಿರ ವರ್ಷದ ಹಿಂದೆಯೇ ಮನುಷ್ಯ ವಾಸವಾಗಿದ್ದ ಕುರುಹುಗಳು ಸಿಕ್ಕಿವೆ. ಚೀರೆಕಲ್ಲು ಕ್ವಾರೆಯ ಗುಹೆಗಳಲ್ಲಿ ಆದಿ ಮಾನವರು ಬಳಸಿದ್ದ ಕೆಲ ವಸ್ತುಗಳು ಕಾಣಿಸಿವೆ. ಹೀಗಾಗಿ ನವ ಶಿಲಾಯುಗಕ್ಕೂ ಮೊದಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನವಸತಿ ಇತ್ತು ಎಂಬುದು ಇನ್ನಷ್ಟು ದೃಢವಾಗಿದೆ.
ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಸಮೀಕ್ಷೆ ನಡೆಸಿದೆ. ಕಾರವಾರದಿಂದ ಭಟ್ಕಳದವರೆಗೆ ಈ ಸಮೀಕ್ಷೆ ನಡೆದಿದ್ದು, ಅಲ್ಲಲ್ಲಿ ಪ್ರಾಗೈತಿಹಾಸಿಕ ಅವಶೇಷಗಳು ಪತ್ತೆಯಾಗಿವೆ. ಐದು ಸಾವಿರ ವರ್ಷಗಳ ಹಿಂದೆ ಈ ಭಾಗದಲ್ಲಿ ಮಾನವನ ವಾಸವಿತ್ತು ಎನ್ನುವುದಕ್ಕೆ ಪೂರಕವಾದ ಅವಶೇಷಗಳು ಅದಾಗಿವೆ. ಬೃಹತ್ ಅಥವಾ ಮಧ್ಯ ಶಿಲಾಯುಗ ಹಾಗೂ ನವ ಶಿಲಾಯುಗದದ ಸೇರಿದ ಪ್ರಾಗೈತಿಹಾಸಿಕ ಅವಶೇಷಗಳನ್ನು ಭಾರತ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು ತಮ್ಮ ಸಮೀಕ್ಷೆಯಲ್ಲಿ ದಾಖಲಿಸಿದ್ದಾರೆ.
ಕರಾವಳಿ ಪ್ರದೇಶದ ಕೆಂಪುಗಲ್ಲು ಗುಡ್ಡಗಳ ಮೇಲೆಅಧ್ಯಯನ ಮಾಡಿದಾಗ ಕೆಲ ಕೇಂದ್ರಗಳ ಬಗ್ಗೆ ಆಸಕ್ತಿ ಮೂಡಿದೆ. ಅಲ್ಲಿ ಹೋಗಿ ಸೂಕ್ಷö್ಮವಾಗಿ ತಪಾಸಣೆ ಮಾಡಿದಾಗ 120 ಮೀಟರ್ ಎತ್ತರದ ಗುಡ್ಡಗಳ ಮೇಲೆ ಅನಾಧಿಕಾಲದ ಕೆಲ ಉಪಕರಣಗಳು ದೊರೆತಿವೆ. ಮೊನಚಾದ ಕಲ್ಲು, ಈಟಿ, ಹೊಂಡ ಕೊರೆಯುವ ಕಲ್ಲು, ಬೆಣಚು ಕಲ್ಲುಗಳ ಜೊತೆ ವಸ್ತುಗಳನ್ನು ತುಂಡರಿಸಲು ಬಳಸುವ ಬ್ಲೇಡ್ ಬಗೆಯ ಕಲ್ಲುಗಳನ್ನು ತಜ್ಞರು ಗುರುತಿಸಿದ್ದಾರೆ. ಕಲ್ಲಿನ ಮೇಲ್ಪದರ ಕೆತ್ತಿ ಸಿದ್ಧಪಡಿಸಲಾದ ಆಯುಧಗಳು ಸಹ ದೊರೆತಿದೆ. 30 ಮೀಟರಿನಿಂದ 120 ಮೀಟರ್‌ವರೆಗಿನ ಕೆಂಪು ಗುಡ್ಡದ ಮೇಲೆ ಈ ಆಯುಧಗಳು ಸಿಕ್ಕಿದ್ದು, ಅವು ಪ್ರಾಣಿಗಳನ್ನು ಭೇಟೆ ಆಡಲು ಹಾಗೂ ಪ್ರಾಣಿಗಳ ಚರ್ಮ ತೆಗೆಯಲು ಬಳಸುತ್ತಿರುವ ಬಗ್ಗೆ ಅಧ್ಯಯನ ಹೇಳಿದೆ. ಶಿಲಾಯುಗದಲ್ಲಿ ಮರಗಳನ್ನು ಕೆರೆಯಲು ಸಹ ಅಂಥ ಆಯುಧ ಬಳಕೆ ಮಾಡುವ ಬಗ್ಗೆ ವಿಶ್ಲೇಷಿಸಲಾಗಿದೆ. ಸಿಕ್ಕ ಅವಶೇಷಗಳಲ್ಲಿ ಬೇಟೆಯಾಡಲು ಬಳಸುತ್ತಿದ್ದ ಈಟಿಯಾಕಾರದ ಮೊನಚಾದ ಕಲ್ಲುಗಳ ಸಂಖ್ಯೆ ಹೆಚ್ಚಿದೆ. ಅವೆಲ್ಲವೂ ಸ್ಪಟಿಕ ಹಾಗೂ ಕಂದು ಬಣ್ಣದ ಶಿಲೆಗಳಿಂದ ರಚಿತವಾಗಿದೆ. ಇದರೊಂದಿಗೆ ನವ ಶಿಲಾಯುಗಕ್ಕೆ ಸೇರಿದ ಕೊಡಲಿ ಹಾಗೂ ಗದೆಯ ಆಕಾರದ ವಸ್ತುಗಳು ಸಹ ಸಿಕ್ಕಿದೆ.
ಅಂಕೋಲಾದ ಬೇಲೆಕೇರಿ, ಬಾವಿಕೇರಿ, ಕಂಚಿನಬೈಲ್, ಶಿರಗುಂಜಿ ಮತ್ತು ಸರಳೆಬೈಲ್ ಪ್ರದೇಶಗಳಲ್ಲಿ ಇಂಥ ಅನಾಧಿ ಕಾಲದ ಆಯುಧಗಳು ಸಿಕ್ಕಿವೆ. ಅದರೊಂದಿಗೆ ಭಟ್ಕಳದ ತಲಾಂದ, ಕುಮಟಾದ ಗೋಕರ್ಣ, ಮೂಡಂಗಿ, ಹರ್ನಿರ್ ಎಂಬಲ್ಲಿ ಮಧ್ಯ ಶಿಲಾಯುಗದ ಅವಶೇಷಗಳು ಸಿಕ್ಕಿವೆ. ಹೊನ್ನಾವರದ ನೀಲಕೋಡ ಹೊಸ ಶಿಲಾಯುಗದ ಅವಶೇಷಗಳು ದೊರಕಿವೆ. ಕುಮಟಾ ಮಿರ್ಜಾನ್‌ನಲ್ಲಿರುವ ಒಂದು ಗುಹೆಯಲ್ಲಿ ಶಿಲಾಯುಗದ ಅವಶೇಷಗಳು ಕಾಣಿಸಿವೆ.