ದಾಂಡೇಲಿಯ ಕಾಳಿ ನದಿಯ ಕಡೆ ಚಂಬು ಹಿಡಿದು ಹೊರಟಿದ್ದ ಆನಂದ್ ನಲ್ಲೂಜಿ ಅವರ ಮೇಲೆ ಮೊಸಳೆ ದಾಳಿ ಮಾಡಿದೆ. ಆನಂದ್ ನಲ್ಲೂಜಿ ಅವರ ಕಾಲನ್ನು ಮೊಸಳೆ ನುಂಗಿದ್ದು, ಸದ್ಯ ಮೊಸಳೆ ಬಾಯಿಂದ ತಪ್ಪಿಸಿಕೊಂಡ ಅವರು ಆಸ್ಪತ್ರೆ ಸೇರಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ಮೊಸಳೆಗಳಿವೆ. ಆದರೆ, ಆ ಮೊಸಳೆಗಳು ಮನುಷ್ಯನ ಮೇಲೆ ದಾಳಿ ಮಾಡಿದ ನಿದರ್ಶನಗಳು ಅಪರೂಪ. ಭಾನುವಾರ ಬೆಳಗ್ಗೆ ಕುಳಗಿ ರಸ್ತೆ ಅಂಚಿನಲ್ಲಿ ಹರಿಯುವ ಕಾಳಿ ನದಿ ಬಳಿ ಆನಂದ್ ನಲ್ಲೂಜಿ ಅವರು ಹೋಗಿದ್ದರು. ಅಲ್ಲಿ ಅವರು ಶೌಚಕ್ಕೆ ಕುಳಿತಾಗ ಸಂಚು ರೂಪಿಸಿದ ಮೊಸಳೆ ಏಕಾಏಕಿ ದಾಳಿ ಮಾಡಿತು. ಈ ವೇಳೆ ಆನಂದ ನಲ್ಲೂಜಿ ಅವರು ದೊಡ್ಡದಾಗಿ ಕೂಗಿಕೊಂಡಿದ್ದು, ಸಮೀಪದಲ್ಲಿದ್ದ ಜನ ಅವರನ್ನು ರಕ್ಷಿಸಿದರು.
ಮೊಸಳೆ ದಾಳಿಯಿಂದಾಗಿ ಆನಂದ ನಲ್ಲೂಜಿ ಅವರ ಕಾಲಿಗೆ ದೊಡ್ಡ ಪ್ರಮಾಣದಲ್ಲಿ ಗಾಯವಾಗಿದೆ. ಮೊಸಳೆಯ ಹಲ್ಲುಗಳು ಕಾಲಿನ ಮೇಲೆ ದೊಡ್ಡ ಗುರುತಾಗಿ ಕಾಣಿಸಿಕೊಂಡಿದೆ. ದೇಹನ ಇನ್ನಿತರ ಭಾಗಗಳಿಗೂ ನೋವಾಗಿದೆ. ಭಾರೀ ಪ್ರಮಾಣದಲ್ಲಿ ಗಾಯಗೊಂಡ ಆನಂದ ನಲ್ಲೂಜಿ ಅವರು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕಳುಹಿಸಲಾಗಿದೆ.
ಮೊಸಳೆಯೊಂದು ಮನುಷ್ಯನ ಮೇಲೆ ದಾಳಿ ಮಾಡಿದ್ದರಿಂದ ಜನ ಆಘಾತಕ್ಕೆ ಒಳಗಾಗಿದ್ದಾರೆ. ನದಿ ಅಂಚಿನ ಪ್ರದೇಶದಲ್ಲಿ ಓಡಾಟದಂತೆ ಎಚ್ಚರಿಸುತ್ತಿದ್ದಾರೆ.