ಕಾರವಾರದ ಕಣಸಗಿರಿ ಬಳಿ ಕಾಡಿನಿಂದ ಬಂದ ಚಿರತೆ ಬೋನಿಗೆ ಬಿದ್ದಿದ್ದು, ಮತ್ತೆ ಕಾಡು ಸೇರಿದೆ. ಬಂದರವಾಡಾ ಪ್ರದೇಶದ ಜನರನ್ನು ಬೆದರಿಸುತ್ತಿದ್ದ ವನ್ಯಜೀವಿಯನ್ನು ಅರಣ್ಯ ಅಧಿಕಾರಿಗಳು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಆ ಚಿರತೆ ನೋಡಿ ಜನ ಆತಂಕಕ್ಕೆ ಒಳಗಾಗಿದ್ದರು. ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡುವ ಸಾಧ್ಯತೆ ಹಿನ್ನಲೆ ಅರಣ್ಯ ಇಲಾಖೆಯವರು ಬೋನು ಅಳವಡಿಸಿದ್ದರು. ಮಾಂಸದ ಆಸೆಗಾಗಿ ಊರಿಗೆ ಬಂದ ಚಿರತೆ ಬೋನಿಗೆ ಬಿದ್ದಿದೆ.
ಬೋನಿನಲ್ಲಿ ಸಿಲುಕಿದ ಬಳಿಕ ಚಿರತೆಯು ಘರ್ಜನೆ ಮಾಡಿ ಹೊರಗೆ ನಿಂತಿದ್ದವರನ್ನು ಬೆದರಿಸಲು ಪ್ರಯತ್ನಿಸಿತು. ಆದರೆ, ಅರಣ್ಯ ಸಿಬ್ಬಂದಿ ಉಪಾಯವಾಗಿ ಪರಿಸ್ಥಿತಿ ನಿಭಾಯಿಸಿದರು. ಸೆರೆ ಹಿಡಿದ ಚಿರತೆಯನ್ನು ವೈದ್ಯಕೀಯ ತಪಾಸಣೆ ನಡೆಸಿ ಕಾಡಿಗೆ ಬಿಟ್ಟರು.