ಕಳೆದ ಮೂರು ದಶಕಗಳಿಂದ ಹಾವುಗಳನ್ನು ಹಿಡಿಯುತ್ತಿದ್ದ ದಾಂಡೇಲಿಯ ರಜಾಕ್ ಶಾ ಅವರ ಮೇಲೆ ಭಾನುವಾರ ಹೆಬ್ಬಾವು ದಾಳಿ ಮಾಡಿದೆ. ರಜಾಕ್ ಅವರ ಕೈ ಗುರಿಯಾಗಿರಿಸಿಕೊಂಡು ಹಾವು ಆಕ್ರಮಣ ಮಾಡಿದ್ದು, ಕ್ಷಣಾರ್ದದಲ್ಲಿ ಅವರು ತಪ್ಪಿಸಿಕೊಂಡಿದ್ದಾರೆ.
ದಾoಡೇಲಿ ನಗರದ ಅಂಬೇವಾಡಿಯಲ್ಲಿರುವ ವಿಟಿಯು ಕಾಲೇಜು ಆವರಣದಲ್ಲಿ ಶನಿವಾರ ಹೆಬ್ಬಾವು ಕಾಣಿಸಿಕೊಂಡಿತು. ಆ ಭಾಗದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಸಿಬ್ಬಂದಿ ರಜಾಕ್ ಶಾ ಅವರ ಜೊತೆ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಶುರು ಮಾಡಿದರು. ಅಲ್ಲಿನ ಗಟಾರದಲ್ಲಿ 15 ಅಡಿಯ ಹೆಬ್ಬಾವು ಅಡಗಿದ್ದು, ರಜಾಕ್ ಶಾ ಅವರು ಅದನ್ನು ಹೊರತರುವ ಪ್ರಯತ್ನ ಮಾಡಿದರು. ಆ ವೇಳೆ ಒಮ್ಮೆಲೆ ಹೆಬ್ಬಾವು ಆಕ್ರಮಣ ನಡೆಸಿತು.
ವಿಟಿಯು ಕಾಲೇಜು ವಿದ್ಯಾರ್ಥಿಗಳು ಹೆಬ್ಬಾವಿನ ಆಕ್ರಮಣ ನೋಡಿ ಆಘಾತಕ್ಕೆ ಒಳಗಾದರು. ಆದರೆ, ಏನೂ ಆಗಿಲ್ಲ ಎಂದು ರಜಾಕ್ ಶಾ ಅವರು ಸಮಾಧಾನ ಮಾಡಿದರು. ಹಾವಿನ ಬಾಯಿಗೆ ರಜಾಕ್ ಅವರ ಬಟ್ಟೆ ಸಿಕ್ಕಿದ್ದು, ಆ ಬಟ್ಟೆಯನ್ನು ಹಾವು ಘಾಸಿಗೊಳಿಸಿತು. ಕೆಲ ಸಮಯದ ನಂತರ ಹಾವು ಚೀಲದೊಳಗೆ ಸಿಕ್ಕಿ ಬಿದ್ದಿತು. ರಜಾಕ್ ಶಾ ಅವರು ಆ ಹಾವನ್ನು ಕಾಡಿಗೆ ಬಿಟ್ಟರು.