ಕಾರವಾರದ ಸದಾಶಿವಗಡ ಬಳಿಯ ಅನಿಲ ಅಂಬೇಕರ್ ಅವರು ಬೀದಿ ನಾಯಿಗಳಿಗೆ ಹೊಟೇಲಿನಿಂದ ಊಟ ತರಿಸಿ ಹಾಕುವ ಹವ್ಯಾಸ ಹೊಂದಿದ್ದಾರೆ. ಅವರು ನಾಯಿಗೆ ಊಟ ಹಾಕುವುದನ್ನು ಸರ್ವೋದಯ ನಗರದ ಕಿರಣ ಕುಡ್ತಳಕರ್ ಅವರು ವಿರೋಧಿಸಿದ್ದಾರೆ.
ಕಾರವಾರದ ಸದಾಶಿವಗಡ ಬಳಿಯ ಮಾಲ್ದರವಾಡದಲ್ಲಿ ಅನಿಲ ಬಾಬು ಅಂಬೇಕರ್ ಅವರು ವಾಸವಾಗಿದ್ದಾರೆ. ವಾಚ್‌ಮೆನ್ ಆಗಿ ಕೆಲಸ ಮಾಡುತ್ತಿರುವ ಅವರಿಗೆ ಬೀದಿ ನಾಯಿಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ತಮ್ಮ ಸಂಬಳದ ಹಣವನ್ನು ವ್ಯಯಿಸಿ ಅವರು ಬೀದಿ ನಾಯಿಗಳಿಗೆ ಹೊಟೇಲಿನಿಂದ ಊಟ ತರಿಸಿ ಬಡಿಸುತ್ತಾರೆ. ಕಾರವಾರದ ರಾಕ್ ಗಾರ್ಡನ್ ಬಳಿ ಅವರು ಕೆಲಸ ಮಾಡುತ್ತಿದ್ದು, ಅಲ್ಲಿಯೇ ಅವರು ನಾಯಿಗಳಿಗೆ ಆಹಾರ ನೀಡುತ್ತ ಬಂದಿದ್ದಾರೆ.
ನಾಯಿಗಳಿಗೆ ಊಟ ನೀಡುವುದಕ್ಕಾಗಿ ಅವರು ಅಲ್ಲಿನ ಅರಣ್ಯ ಇಲಾಖೆಯ ಜಾಗವನ್ನು ಬಳಸಿಕೊಂಡಿದ್ದಾರೆ. ಹೀಗಿರುವಾಗ ಅನಿಲ ಅಂಬೇಕರ್ ಅವರು ನಾಯಿಗೆ ಊಟ ಕೊಡುವುದನ್ನು ಕಾಜುಭಾಗ ಸರ್ವೋದಯ ನಗರದ ಕಿರಣ ಅರ್ಜುನ್ ಕುಡ್ತಳಕರ್ ಅವರು ಸಹಿಸುತ್ತಿಲ್ಲ. ನಾಯಿಗೆ ಊಟ ಹಾಕುವ ಅನಿಲ ಅಂಬೇಕರ್ ಅವರ ಪತ್ನಿಯನ್ನು ನಿಂದಿಸಿ ಕಿರಣ ಕುಡ್ತಳಕರ್ ಅವರು ಮಾತನಾಡುತ್ತಿದ್ದು, ನಾಯಿಗೆ ಊಟ ಬಡಿಸುವ ವಿಚಾರದಲ್ಲಿಯೇ ಅವರ ನಡುವೆ ವೈಮನಸ್ಸು ಮೂಡಿದೆ.
ತಿಂಗಳ ಹಿಂದೆ ಅನಿಲ ಅಂಬೇಕರ್ ಅವರು ಹೊಟೇಲಿನಿಂದ ಬಿಸಿ ಬಿಸಿ ಊಟ ತಂದು ನಾಯಿಗಳಿಗೆ ಹಾಕುವಾಗ ಅಲ್ಲಿ ಕಿರಣ ಕುಡ್ತಳಕರ್ ಅವರು ಆಗಮಿಸಿದ್ದಾರೆ. `ನಾಯಿಗೆ ಏಕೆ ಊಟ ಹಾಕುವೆ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸುವುದರೊಳಗೆ ಅನಿಲ ಅಂಬೇಕರ್ ಅವರ ಕೆನ್ನೆಗೆ ಬಾರಿಸಿದ್ದಾರೆ. ಈ ಬಗ್ಗೆ ಅನಿಲ ಅಂಬೇಕರ್ ಅವರು ಪೊಲೀಸ್ ದೂರು ನೀಡಿದ್ದು, ಸದ್ಯ ನ್ಯಾಯಾಲಯದ ಸೂಚನೆ ಮೇರೆಗೆ ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.