ಬಿಸಿ ನೀರು ಕಾಯಿಸಲು ಬಚ್ಚಲು ಮನೆಗೆ ಬೆಂಕಿ ಹಾಕಿದ್ದ ಕುಮಟಾದ ಶಾಹೀನ್ ಲಂಗಡೋ ಅವರು ಅದೇ ಬೆಂಕಿಯಲ್ಲಿ ಬೆಂದು ಸಾವನಪ್ಪಿದ್ದಾರೆ. ಕೈಯಲ್ಲಿದ್ದ ಸೀಮೆ ಎಣ್ಣೆಗೆ ಮೊದಲು ಅಗ್ನಿಸ್ಪರ್ಶವಾಗಿದ್ದು, ಅದರ ಜ್ವಾಲೆ ಶಾಹೀನ್ ಅವರ ಮೈ ಸುಟ್ಟಿದೆ.
ಕುಮಟಾದ ವನ್ನಳ್ಳಿಯಲ್ಲಿ ಶಾಹೀನ್ ದಾವೂದ್ ಲಂಗಡೋ (28) ಅವರು ವಾಸವಾಗಿದ್ದರು. ಮನೆ ಕೆಲಸ ಮಾಡಿಕೊಂಡಿದ್ದ ಅವರು ನಿತ್ಯವೂ ಬಚ್ಚಲು ಮನೆಗೆ ಬೆಂಕಿ ಹಾಕಿ ಬಿಸಿ ನೀರು ಕಾಯಿಸುತ್ತಿದ್ದರು. ಇದಕ್ಕಾಗಿ ಅವರು ಸೀಮೆ ಎಣ್ಣೆ ಬಳಸುತ್ತಿದ್ದರು. ಪ್ಲಾಸ್ಟಿಕ್ ಬಾಟಲಿಯಲ್ಲಿ ಸೀಮೆ ಎಣ್ಣೆ ಶೇಖರಿಸಿಕೊಂಡು, ನಿತ್ಯವೂ ಅದನ್ನು ಅಲ್ಪ-ಸ್ವಲ್ಪ ಬಳಕೆ ಮಾಡುತ್ತಿದ್ದರು.
ಏಪ್ರಿಲ್ 22ರ ಬೆಳಗ್ಗೆಯೂ ಅವರು ಎಂದಿನAತೆ ಬಚ್ಚಲು ಮನೆ ಪ್ರವೇಶಿಸಿದರು. ಬಿಸಿ ನೀರು ಇಲ್ಲದ ಕಾರಣ ಸೀಮೆ ಎಣ್ಣೆ ಹಿಡಿದು ಬೆಂಕಿಯ ಬಳಿ ಬಂದರು. ಕಟ್ಟಿಗೆಗೆ ಅಂಟಿದ ಬೆಂಕಿ ಆ ಸೀಮೆ ಎಣ್ಣೆ ಬಾಟಲಿಯವರೆಗೂ ಬಂದಿದ್ದು, ದಿಢೀರ್ ಆಗಿ ಜ್ವಾಲೆ ದೊಡ್ಡದಾಯಿತು. ಆ ಬೆಂಕಿ ಬಟ್ಟೆಗೆ ತಾಗಿ ಕೈ-ಮುಖವನ್ನು ಸುಟ್ಟಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಶಾಹೀನ್ ಲಂಗಡೋ ಅವರನ್ನು ಮಂಗಳೂರಿಗೆ ದಾಖಲಿಸಲಾಯಿತು.
ಪಾದರ್ ಮುಲ್ಲಾ ಆಸ್ಪತ್ರೆಯ ಆರೈಕೆಯಲ್ಲಿದ್ದ ಶಾಹೀನ್ ಲಂಗಡೋ ಅವರು ಚೇತರಿಸಿಕೊಳ್ಳಲಿಲ್ಲ. ಪದೇ ಪದೇ ಅವರ ದೇಹ ಕ್ಷಿಣಿಸಲು ಶುರುವಾಗಿದ್ದು, ಮೇ 3ರಂದು ಕೊನೆಯುಸಿರೆಳೆದರು. ಕುಮಟಾದ ಕಿಮಾನಿ ಮೂಲದ ಹಸೀನಾ ಕಾಲಿದ್ ಪನಸುಕರ್ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು.