ಯಲ್ಲಾಪುರದ ಇಡಗುಂದಿಯಲ್ಲಿ ಲಾರಿಯೊಂದು ಬೈಕ್ ಸವಾರನ ಮೇಲೆ ಹರಿದಿದೆ. ಬೈಕ್ ಓಡಿಸುತ್ತಿದ್ದ ಹರೀಶ ಸಿದ್ದಿ ಅಲ್ಲಿಯೇ ಶವವಾಗಿದ್ದಾರೆ.
ಬುಧವಾರ ಉತ್ತರ ಪ್ರದೇಶದ ಧರ್ಮೇಂದ್ರ ಕುಮಾರ ಅವರು ಅಂಕೋಲಾದಿಂದ ಯಲ್ಲಾಪುರ ಕಡೆ ಕಂಟೇನರ್ ಲಾರಿ ಓಡಿಸುತ್ತಿದ್ದರು. ಆ ಕಂಟೇನರ್ ವೇಗವಾಗಿ ಸಾಗಿದ್ದು, ಇಡಗುಂದಿಯ ಬಳಿ ಸೋನಾರಕೇರಿಯ ಸುರೇಶ ಸಿದ್ದಿ ಅವರ ಬೈಕನ್ನು ಹಿಂದಿಕ್ಕಿತು. ಅದಾದ ನಂತರವೂ ಅದೇ ವೇಗದಲ್ಲಿ ಸಾಗಿದ ಕಂಟೇನರ್ ಮುಂದಿದ್ದ ಹರೀಶ ಸಿದ್ದಿ ಅವರ ಬೈಕಿಗೆ ಗುದ್ದಿತು.
ಕಂಟೇನರ್ ಲಾರಿಯ ಹಿಂದಿನ ಭಾಗ ಬೈಕಿಗೆ ಗುದ್ದಿದ ಪರಿಣಾಮ ಆ ಬೈಕಿನಲ್ಲಿದ್ದ ಹರೀಶ ಸಿದ್ದಿ ಅವರು ನೆಲಕ್ಕೆ ಬಿದ್ದರು. ಆ ಕಂಟೇನರಿನ ಹಿಂದಿನ ಚಕ್ರ ಹರೀಶ ಸಿದ್ದಿ ಅವರ ತಲೆ ಮೇಲೆ ಹತ್ತಿತು. ಪರಿಣಾಮ ಹರೀಶ ಸಿದ್ದಿ ಅವರು ಅಲ್ಲಿಯೇ ಸಾವನಪ್ಪಿದರು.
ಹೆದ್ದಾರಿ ಮೇಲೆ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದನ್ನು ನೋಡಿ ಜನ ಆಘಾತಕ್ಕೆ ಒಳಗಾದರು. ಹಿಂದಿದ್ದ ಬೈಕಿನಲ್ಲಿ ಬರುತ್ತಿದ್ದ ಇಡಗುಂದಿಯ ಸೋನಗಾರಕೇರಿಯ ಸುರೇಶ ಗಣಪಾ ಸಿದ್ದಿ ಅವರು ಅಪಘಾತವನ್ನು ಕಣ್ಣಾರೆ ಕಂಡರು. ನಂತರ ಸುರೇಶ ಸಿದ್ದಿ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಲಾರಿ ಚಾಲಕನ ವಿರುದ್ಧ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು.