ಕೋಟ್ಯಂತರ ರೂ ವೆಚ್ಚ ಮಾಡಿ ಕಾರವಾರ-ಹಬ್ಬುವಾಡ ಮಾರ್ಗವನ್ನು ಸಿಮೆಂಟ್ ರಸ್ತೆಯನ್ನಾಗಿ ಮಾಡಲಾಗಿದ್ದು, ಸದ್ಯ ಆ ಸಿಮೆಂಟ್ ರಸ್ತೆಗೆ ಡಾಂಬರ್ ಸುರಿಯಲಾಗಿದೆ. ಗುತ್ತಿಗೆದಾರ ಮಾಡಿದ ಅವಾಂತರ ನೋಡಿ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗಿದ್ದಾರೆ!
ಕಳೆದ ವರ್ಷ ಕಾರವಾರ-ಹಬ್ಬುವಾಡ ರಸ್ತೆ ನಿರ್ಮಾಣ ನಡೆದಿತ್ತು. ಇಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ಸಮಸ್ಯೆಯಿರಲಿಲ್ಲ. ಹೀಗಿರುವಾಗ ಮಂಗಳವಾರ ವಿಜಯಪುರದ ಗುತ್ತಿಗೆದಾರ ಎಸ್ ಎಸ್ ಆಲೂರು ಅವರು ಆ ರಸ್ತೆ ಮೇಲೆ ಸಿಮೆಂಟ್ ಸುರಿದಿದ್ದಾರೆ. ಡಾಂಬರ್ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಮಾಡುವುದು ಸಾಮಾನ್ಯ. ಆದರೆ, ಸಿಮೆಂಟ್ ರಸ್ತೆಯನ್ನು ಡಾಂಬರೀಕರಣ ಮಾಡುತ್ತಿರುವುದನ್ನು ನೋಡಿ ಜನ ಅಚ್ಚರಿಗೆ ಒಳಗಾದರು.
ಸರಿಯಾಗಿದ್ದ ರಸ್ತೆಯ ಮೇಲೆ ಡಾಂಬರ್ ಸುರಿದ ಬಗ್ಗೆ ಜನ ಪ್ರಶ್ನಿಸಿದಾಗ `ನಮ್ಮಲ್ಲಿ ಆರ್ಡರ್ ಇದೆ’ ಎಂದು ಗುತ್ತಿಗೆದಾರ ಹೇಳಿದ್ದು ಜನರನ್ನು ಕೆರಳಿಸಿತು. ಸರಿಯಾಗಿದ್ದ ರಸ್ತೆಯನ್ನು ಹಾಳು ಮಾಡಿದ ಬಗ್ಗೆ ಜನ ಚಿಂತಿಸಿದರು. `ಇದೊಂದು ಹೊಸ ತಂತ್ರಜ್ಞಾನವಿರಬಹುದು’ ಎಂದು ಕೆಲವರು ಗೂಗಲ್ ಮೊರೆ ಹೋದರು. ಆದರೆ, ಎಲ್ಲಿಯೂ ಅದಕ್ಕೆ ಉತ್ತರ ಸಿಗಲಿಲ್ಲ. ಕೊನೆಗೆ ಬೇರೆ ನಗರಗಳ ಪರಿಣಿತರಿಗೆ ಕರೆ ಮಾಡಿದಾಗ ಇದು ಕೇವಲ ಒಂದು ತಾಂತ್ರಿಕ ಎಡವಟ್ಟು ಎಂಬುದು ಗೊತ್ತಾಯಿತು. ರಸ್ತೆಯ ಗುಣಮಟ್ಟವನ್ನು ಹೆಚ್ಚಿಸುವ ಬದಲು, ಇರುವ ರಸ್ತೆಯನ್ನೇ ಹಾಳು ಮಾಡುತ್ತಿರುವುದನ್ನು ಮನಗಂಡ ಜನರು ತಕ್ಷಣವೇ ನಗರಸಭೆ ಮತ್ತು ಲೋಕೋಪಯೋಗಿ ಅಧಿಕಾರಿಗಳನ್ನು ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಿದರು. ಆದರೆ, ಅಷ್ಟರಲ್ಲಾಗಲೇ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಯು ಡಾಂಬರ್ ಹಾಲಾಗಿತ್ತು. ಪರಿಣಾಮ ಆ ರಸ್ತೆಯ ಅಂದ ಹಾಗೂ ಬಾಳಿಕೆ ಎರಡೂ ಹಾಳಾಗಿದೆ. ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರ್ ಹಾಕುವುದರಿಂದ ಮಳೆಗಾಲದಲ್ಲಿ ರಸ್ತೆ ಜಾರಿಕೆಯಾಗಿ ಅಪಘಾತ ನಡೆಯುವ ಸಾಧ್ಯತೆಯೂ ಹೆಚ್ಚಿದೆ.