ಹೊನ್ನಾವರ ಹೊಸಾಕುಳಿಯ ಶ್ರೀಪಾದ ನಾಯ್ಕ ಅವರು ತೆಂಗಿನ ಮರದಿಂದ ಬಿದ್ದು ಸಾವನಪ್ಪಿದ್ದಾರೆ. ಮಂಜುನಾಥ ನಾಯ್ಕ ಅವರ ತೋಟದಲ್ಲಿ ಕಾಯಿ ಕೀಳುವಾಗ ಈ ಅವಘಡ ನಡೆದಿದೆ.
ಹೊನ್ನಾವರದ ದೊಡ್ಡಹಿತ್ತಲು ಬಳಿಯ ಹೊಸಾಕುಳಿಯಲ್ಲಿ ಶ್ರೀಪಾದ ಗಣಪತಿ ನಾಯ್ಕ (55) ಅವರು ವಾಸವಾಗಿದ್ದರು. ಕೃಷಿ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ತೆಂಗಿನ ಮರ ಹತ್ತಿ ಕಾಯಿ ಕೊಯ್ಯುವ ಕೆಲಸವನ್ನು ಸಹ ಅವರು ಮಾಡುತ್ತಿದ್ದರು. ಮೇ 2ರಂದು ಅವರು ಹೊಸಾಕುಳಿ ದೊಡ್ಡಹಿತ್ತಲು ಗ್ರಾಮದಲ್ಲಿರುವ ಮಂಜುನಾಥ ತಿಮ್ಮಪ್ಪ ನಾಯ್ಕ ಅವರ ತೋಟಕ್ಕೆ ಹೋಗಿದ್ದರು.
ಬೆಳಗ್ಗೆಯಿಂದ ಕಾಯಿ ಕೊಯ್ಯುತ್ತಿದ್ದ ಅವರು ಮಧ್ಯಾಹ್ನದ ವೇಳೆಗೆ ಆಯಾಸಕೊಂಡರು. ಆದರೂ, ತಮ್ಮ ಕೆಲಸ ಮುಂದುವರೆಸಿದರು. 12.30ರ ಸುಮಾರಿಗೆ ಕಾಲು ಜಾರಿ ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರೆಗೆ ಸಾಗಿಸುವ ವೇಳೆ ಭಟ್ಕಳ ಸಮೀಪ ಸಾವನಪ್ಪಿದರು. ಅಣ್ಣನ ಸಾವಿನ ಬಗ್ಗೆ ಮಂಜುನಾಥ ನಾಯ್ಕ ಅವರು ಮಾಹಿತಿ ನೀಡಿದ್ದು, ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.