ಹೊನ್ನಾವರದ ಖಾರ್ವಾ ಗ್ರಾಮದ ಬಳಿಯಿರುವ ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಟ ನಡೆದಿದ್ದು, ಆ ಆಟದ ವೇಳೆ ಹೊಡೆದಾಟವೂ ನಡೆದಿದೆ. ಅಬ್ದುಲ್ ರೆಹಮಾನ್ ಅವರು `ಔಟ್’ ಆದ ಬಗ್ಗೆ ಅಂಪೈರ್ ತೀರ್ಪು ನೀಡಿದಾಗ, ಅದನ್ನು ವಿರೋಧಿಸಿ ಸುಬಾನ ಫಕರ್ದಿನ ಮತ್ತು ಮೇಹದಿ ಫಕರ್ದಿನ ಗಲಾಟೆ ಮಾಡಿದ್ದಾರೆ.
ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ವಲ್ಕಿ ಬಳಿಯ ಕೊಳಗದ್ದೆ ಶಾಲಾ ಮೈದಾನದಲ್ಲಿ ಮೇ 5ರಂದು ಕ್ರಿಕೆಟ್ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅಬ್ದುಲ್ ರೆಹಮಾನ್ ಔಟ್ ಆಗಿದ್ದು, ಅಂಪೈರ್ `ಔಟ್’ ಎಂದು ತೀರ್ಪು ನೀಡಿದ್ದರು. ಆಗ, ಅದೇ ಊರಿನ ಸುಬಾನ ಖಾಜಾ ಫಕರ್ದಿನ (24) ಮತ್ತು ಮೇಹದಿ ಖಾಜಾ ಫಕರ್ದಿನ (21) ಇದನ್ನು ವಿರೋಧಿಸಿದರು.
ಈ ವೇಳೆ ಜಗಳ ಶುರುವಾಗಿದ್ದು, ಶೇಖ್ ಮಹಮದ್ ಜುಬೇರ್ ಹಾಜಿ ಶರೀಫ್ ಅವರು ಜಗಳ ತಡೆಯುವ ಪ್ರಯತ್ನ ಮಾಡಿದ್ದರು. ಆದರೆ, ಜಗಳ ತಡೆಯಲು ಬಂದವರಿಗೆ ಆರೋಪಿತರು ಹೊಡೆದರು. ಶೇಖ್ ಮಹಮದ್ ಜುಬೇರ್ ಹಾಜಿ ಶರೀಫ್ ಅವರಿಗೆ ಬ್ಯಾಟಿನಿಂದ ಏಟು ಬಿದ್ದ ಪರಿಣಾಮ ಅವರು ಗಾಯಗೊಂಡರು. ಈ ಬಗ್ಗೆ ಅವರು ಹೊನ್ನಾವರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದರು.