ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ 40 ವರ್ಷಗಳಿಂದ ವೈದ್ಯಾಧಿಕಾರಿಯಾಗಿದ್ದ ಅಂಕೋಲಾ ಮೂಲದ ಡಾ ದಿನೇಶ ಭಟ್ಕಳ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಅವರು ಸಾವನಪ್ಪಿದ್ದಾರೆ. ಸಾವಿಗೂ ಮುನ್ನ ಅವರು ಕೆಎಲ್ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ವಾಟ್ಸಪ್ ಮೆಸೆಜ್ ಮಾಡಿದ್ದಾರೆ.
ಡಾ ದಿನೇಶ ಭಟ್ಕಳ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರಾಗಿದ್ದು, ಅಂಕೋಲಾದಲ್ಲಿರುವ ಕೆಎಲ್ಇ ಸಂಸ್ಥೆಗೆ ಆಡಳಿತಾಧಿಕಾರಿಯೂ ಆಗಿದ್ದರು. 79 ವರ್ಷದ ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಅವರಿಗೆ ಈ ಸಮಸ್ಯೆಯಿರುವುದು ಗೊತ್ತಾಗಿತ್ತು. ಚಿಕಿತ್ಸೆಗೆ ಒಳಗಾಗಿದ್ದ ಅವರು ಈಚೆಗೆ ಬೆಳಗಾವಿಯ ಮನೆಗೆ ಬಂದು ವಾಸವಾಗಿದ್ದರು. ತಮ್ಮ ವೈಯಕ್ತಿಕ ರಕ್ಷಣೆಗಾಗಿ ಅವರು ಪಿಸ್ತೂಲುಪಡೆದಿದ್ದು, ಅದೇ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವನಪ್ಪಿದ್ದಾರೆ.
ಬೆಳಗಾವಿಯ ಟಿಳಕವಾಡಿಯ ಮಂಡೋಲಿ ರಸ್ತೆಯಲ್ಲಿ ಮನೆ ಮಾಡಿಕೊಂಡು ಅಲ್ಲಿಯೇ ಡಾ ದಿನೇಶ ಭಟ್ಕಳ ಅವರು ಕುಟುಂಬಸ್ಥರೊAದಿಗೆ ವಾಸವಿದ್ದರು. ಶ್ವಾಸಕೋಶ ಕ್ಯಾನ್ಸರ್ ಕಾರಣ ಅವರು ಅಸಾಧಾರಣ ನೋವು ಅನುಭವಿಸಿದ್ದು, ಅದೇ ನೋವಿನಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ನೋವಿನ ಬಗ್ಗೆ ಅವರು ಆಗಾಗ ಸ್ನೇಹಿತರಲ್ಲಿಯೂ ಹೇಳಿದ ನಿದರ್ಶನಗಳಿವೆ. ಶುಕ್ರವಾರ ಬೆಳಗ್ಗೆ ಎದ್ದ ತಕ್ಷಣ ದಿನೇಶ್ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಅವರು ತಮ್ಮ ಹಿತೈಷಿಗಳು ಹಾಗೂ ಮಾರ್ಗದರ್ಶಕರಿಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಅದರಲ್ಲಿ ಕೆಎಲ್ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆಯವರಿಗೂ ಸಹ ವಾಟ್ಸಪ್ ಸಂದೇಶ ಕಳಿಸಿದ್ದಾರೆ.
‘ನನಗೆ ನೀವು ಇಷ್ಟು ವರ್ಷ ಸಹಾಯ ಮಾಡಿದ್ದೀರಿ. ಆದರೆ, ನನಗೆ ತೀವ್ರವಾದ ಎದೆ ನೋವಿದೆ. ನಾನು ನೋವಿನಿಂದ ಬೇಸತ್ತು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ. ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ’ ಎಂದು ಅವರು ಸಂದೇಶ ಕಳುಹಿಸಿ ಸಾವನಪ್ಪಿದ್ದಾರೆ.