ಶಿರಸಿ ನಗರದ ಯಲ್ಲಾಪುರ ರಸ್ತೆಯ ದೇವನಿಲಯದ ಬಳಿ ಬಸ್-ಲಾರಿ-ಮಿನಿ ಟ್ರಕ್ ನಡುವೆ ಅಪಘಾತ ನಡೆದಿದೆ. ಅಪಘಾತದ ಪರಿಣಾಮ ಆ ಜಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ಮoಗಳವಾರ ಮಧ್ಯಾಹ್ನ ಮಿನಿ ಟ್ರಕ್‌ವೊಂದರಲ್ಲಿ ಅನಾನಸ್ ಸಾಗಾಟ ನಡೆದಿದ್ದು, ದೇವನಿಲಯದ ಬಳಿ ಆ ಟ್ರಕ್ ಸರ್ಕಾರಿ ಬಸ್ಸಿಗೆ ಡಿಕ್ಕಿಯಾಯಿತು. ಬಸ್ಸಿಗೆ ಹಿಂದಿನಿoದ ಟ್ರಕ್ ಗುದ್ದಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಆಘಾತಕ್ಕೆ ಒಳಗಾದರು. ಅದೇ ವೇಳೆಗೆ ಆ ಟ್ರಕ್‌ಗೆ ಚೀರೆಕಲ್ಲು ತುಂಬಿಕೊoಡು ಬರುತ್ತಿದ್ದ ಮತ್ತೊಂದು ಲಾರಿ ಗುದ್ದಿತು. ಇದರಿಂದ ಟ್ರಕ್ ಇನ್ನೊಮ್ಮೆ ಬಸ್ಸಿಗೆ ಗುದ್ದಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಗಿಳಿಯುವ ಪ್ರಯತ್ನ ಮಾಡಿದರು.
ಆದರೆ, ಪ್ರಯಾಣಿಕರು ಕೆಳಗೆ ಇಳಿಯದಂತೆ ಬಸ್ ಸಿಬ್ಬಂದಿ ಮನವಿ ಮಾಡಿದರು. ಅಷ್ಟರೊಳಗೆ ಅಲ್ಲಿ ಜನ ಜಮಾಯಿಸಿದ್ದು, ತಪ್ಪಿತಸ್ಥರನ್ನು ತರಾಠೆಗೆ ತೆಗೆದುಕೊಂಡರು. ಈ ಸರಣಿ ಅಪಘಾತದಲ್ಲಿ ಯಾವುದೇ ಬಗೆಯ ಪ್ರಾಣ ಹಾನಿ ನಡೆಯಲಿಲ್ಲ. ಅಪಘಾತಕ್ಕೀಡಾದ ವಾಹನಗಳಿಗೆ ಅಲ್ಲಲ್ಲಿ ಹಾನಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದ್ದಾರೆ.