ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಬೈಕ್ ಓಡಿಸಿದ ಮುಂಡಗೋಡು ಚಿಟಗೇರಿಯ ಗಂಗು ಎಡಿಗೆ ಅವರು `ನಿಧಾನವಾಗಿ ಬೈಕ್ ಓಡಿಸು’ ಎಂದು ಹೇಳಿದ ದೀಪಶ್ರೀ ಓಣಿಕೇರಿ ಅವರಿಗೆ ಬಡಿಗೆಯಿಂದ ಬಡಿದಿದ್ದಾರೆ. ಜೊತೆಗೆ ದೀಪಶ್ರೀ ಓಣಿಕೇರಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾರೆ.
ಮುಂಡಗೋಡಿನ ಬಸವರಾಜ ಓಣಿಕೇರಿ ಅವರು ಕುಟುಂಬಸಹಿತ ಶಿರಸಿಯಲ್ಲಿ ನಡೆದ ಸಂಬoಧಿಕರ ಮದುವೆಗೆ ಹೋಗಿದ್ದರು. ಮದುವೆ ಮುಗಿಸಿ ಸಂಜೆ ಅವರು ಯಲ್ಲಾಪುರದ ಉಮ್ಮಚ್ಗಿ ಮಾರ್ಗವಾಗಿ ಮನೆಗೆ ಮರಳುತ್ತಿದ್ದರು. ಚಿಟಗೇರಿ ಬಳಿ ಗಂಗು ಎಡಿಗೆ ಎಂಬಾತರು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು. ಬಸವರಾಜ ಓಣಿಕೇರಿ ಅವರ ಕಾರಿಗೆ ಪದೇ ಪದೇ ಬೈಕ್ ಅಡ್ಡ ಬರುತ್ತಿದ್ದು, ಇದನ್ನು ಬಸವರಾಜ ಓಣಿಕೇರಿ ಅವರು ಪ್ರಶ್ನಿಸಿದರು. `ಸರಿಯಾಗಿ ಬೈಕ್ ಓಡಿಸು. ನಿಧಾನವಾಗಿ ಹೋಗು’ ಎಂದು ಕಾರಿನಲ್ಲಿದ್ದವರು ಕಿವಿಮಾತು ಹೇಳಿದರು. ಇದರಿಂದ ಸಿಟ್ಟಾದ ಗಂಗು ಎಡಿಗೆ ಕಾರಿಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ, ಬಸವರಾಜ ಓಣಿಕೇರಿ ಅವರನ್ನು ನಿಂದಿಸಲು ಶುರು ಮಾಡಿದರು.
ಗಂಗು ಎಡಿಗೆ ಅವರು ಬಸವರಾಜ ಓಣಿಕೇರಿ ಅವರ ಮೈ ಮುಟ್ಟಲು ಬಂದಾಗ ಕಾರಿನಲ್ಲಿದ್ದ ಅವರ ಪತ್ನಿ ಮೇಘನಾ ಓಣಿಕೇರಿ, ಮಗಳು ಮೇಘನಾ ಓಣಿಕೇರಿ ಹಾಗೂ ಮತ್ತೊಬ್ಬ ಮಗಳು ದೀಪಶ್ರೀ ಓಣಿಕೇರಿ ಅವರು ಅದನ್ನು ತಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಹೊಡೆದಾಟ ತಪ್ಪಿಸಲು ಮುಂದಾದ ದೀಪಶ್ರೀ ಓಣಿಕೇರಿ ಅವರ ಮೇಲೆ ಗಂಗು ಎಡಿಗೆ ಕೈ ಮಾಡಿದ್ದು, ಅಲ್ಲಿದ್ದ ಬಡಿಗೆಯಿಂದ ತಲೆಗೆ ಬಾರಿಸಿದರು. ಜೊತೆಗೆ ದೀಪಶ್ರೀ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಳೆದರು. ಈ ಗಲಾಟೆಯಲ್ಲಿ ಚಿನ್ನದ ಸರದ ಜೊತೆ ಮೊಬೈಲ್ ಸಹ ಕಣ್ಮರೆಯಾಯಿತು. ದೀಪಶ್ರೀ ಅವರ ತಲೆಭಾಗದಿಂದ ರಕ್ತ ಬರುತ್ತಿದ್ದ ಕಾರಣ ತುರ್ತು ಚಿಕಿತ್ಸೆ ಅಗತ್ಯವಿತ್ತು. ಹೀಗಾಗಿ ಬಸವರಾಜ ಓಣಿಕೇರಿ ಅವರು ಚಿನ್ನದ ಸರ ಹಾಗೂ ಮೊಬೈಲಿಗಾಗಿ ತಲೆಕೆಡಿಸಿಕೊಂಡಿಲ್ಲ. ತಕ್ಷಣ ಅವರು ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು.
ದೀಪಶ್ರೀ ಓಣಿಕೇರಿ ಅವರಿಗೆ ಮುಂಡಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಯಿತು. ಅದಾದ ನಂತರ ಮತ್ತೆ ಮುಂಡಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ವಿಷಯದ ಬಗ್ಗೆ ಮಾಹಿತಿಪಡೆದಿದ್ದು, ಗಂಗು ಎಡಿಗೆ ಅವರ ವಿಚಾರಣೆ ನಡೆಸಿದ್ದಾರೆ.