ಯಲ್ಲಾಪುರ ಪೊಲೀಸ್ ಠಾಣೆಯನ್ನು ನಿಜವಾಗಿಯೂ ಜನಸ್ನೇಹಿಯಾಗಿಸಿದ್ದ ಪಿಐ ರಮೇಶ ಹಾನಾಪುರ ಅವರು ಮುಂಡಗೋಡಿಗೆ ವರ್ಗವಾಗಿದ್ದಾರೆ. ಜನ-ಜನಪ್ರತಿನಿಧಿಗಳೊಂದಿಗೆ ಪೊಲೀಸ್ ಸಿಬ್ಬಂದಿ ಜೊತೆಯೂ ಅತ್ಯಂತ ಗೌರವ ಹಾಗೂ ಸೌಜನ್ಯದಿಂದ ವರ್ತಿಸುತ್ತಿದ್ದ ರಮೇಶ ಹಾನಾಪುರ ಅವರನ್ನು ಜನ ಅತ್ಯಂತ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ.
ಎರಡುವರೆ ವರ್ಷದ ಹಿಂದೆ ರಮೇಶ ಹಾನಾಪುರ ಅವರು ಯಲ್ಲಾಪುರ ಪಿಐ ಆಗಿ ಅಧಿಕಾರವಹಿಸಿಕೊಂಡಿದ್ದರು. ಈ ಹಿಂದೆ ಲೋಕಾಯುಕ್ತ ಸೇರಿ ವಿವಿಧ ಕಡೆ ಕೆಲಸ ಮಾಡಿದ್ದ ಅನುಭವದ ಆಧಾರದಲ್ಲಿ ಅನೇಕ ಅಪರಾಧ ಪ್ರಕರಣಗಳನ್ನು ಅವರು ಬೇದಿಸಿದರು. ಕೈಯಲ್ಲ ಖಡಕ್ ಅಧಿಕಾರ ಇದ್ದರೂ ಅದನ್ನು ಪ್ರದರ್ಶಿಸುತ್ತಿರಲಿಲ್ಲ. ಯಾರ ಜೊತೆಯೂ ರಮೇಶ ಹಾನಾಪುರ ಅವರು ದರ್ಪದಿಂದ ನಡೆದುಕೊಂಡಿಲ್ಲ. ಜನ ಸಾಮಾನ್ಯರ ಜೊತೆ ಸಾಮಾನ್ಯರಂತೆ ಬೆರೆಯುತ್ತಿದ್ದರು. ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ, ಗೌರವಿಸಿ ಅವರು ಠಾಣೆಗೆ ಬರಮಾಡಿಕೊಳ್ಳುತ್ತಿದ್ದರು. ಯಾರ ಮನಸ್ಸನ್ನು ಸಹ ನೋಯಿಸದೇ ಅವರು ಕೆಲಸ ಮಾಡುತ್ತಿದ್ದು, ತಮ್ಮ ಚಾಣಾಕ್ಷತನ ಹಾಗೂ ತಾಳ್ಮೆಯಿಂದ ಜನರ ಮನಗೆದ್ದಿದ್ದರು. ತಾವಷ್ಟೇ ಅಲ್ಲ.. ತಮ್ಮ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಪ್ರತಿ ಸಿಬ್ಬಂದಿಯೂ ಸಾರ್ವಜನಿಕರ ಜೊತೆ ತಾಳ್ಮೆ ಹಾಗೂ ಸೌಜನ್ಯದಿಂದ ವರ್ತಿಸುವ ಹಾಗೇ ಅವರು ನೋಡಿಕೊಂಡಿದ್ದರು.
ಅತ್ಯoತ ಕ್ಲಿಷ್ಟಕರ ಕೇಸುಗಳನ್ನು ಸಹ ರಮೇಶ ಹಾನಾಪುರ ಅವರು ಉಪಾಯವಾಗಿ ಬಗೆಹರಿಸಿದ್ದರು. ದ್ವೇಷ, ಗಲಭೆಯ ಪರಿಸ್ಥಿತಿಯನ್ನು ಸಹ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಸಾಕಷ್ಟು ಒತ್ತಡ, ಅಲೆದಾಟಗಳಿದ್ದರೂ ನೊಂದವರಿಗೆ ಅನ್ಯಾಯವಾಗದ ರೀತಿ ನೋಡಿಕೊಳ್ಳುತ್ತಿದ್ದರು. ಜನಸಾಮಾನ್ಯರು ಹಾಗೂ ಪ್ರಭಾವಿಗಳನ್ನು ಅತ್ಯಂತ ನಾಚೂಕು ರೀತಿಯಿಂದ ಸಂಬಾಳಿಸುತ್ತಿದ್ದರು. ಅತ್ಯಂತ ಮೃದು ಸ್ವಭಾವ ಹಾಗೂ ಅಷ್ಟೇ ಪರಿಶುದ್ಧ ಮನಸ್ಸಿನ ವ್ಯಕ್ತಿತ್ವದ ರಮೇಶ ಹಾನಾಪುರ ಅವರು ಈವರೆಗೂ ಯಾರಿಗೂ ಅವರು ಕೆಟ್ಟದಾಗಿ ನಿಂದಿಸಿಲ್ಲ. ಯಾರನ್ನು ಸಹ ಬೈದ ನಿದರ್ಶನಗಳಿಲ್ಲ. ರಮೇಶ ಹಾನಾಪುರ ಅವರ ವ್ಯಕ್ತಿತ್ವ ಹಾಗೂ ಅವರ ಸಾಧನೆಗೆ ರಾಷ್ಟçಪತಿ ಪುರಸ್ಕಾರ ಸಿಕ್ಕಿದೆ. ಮುಖ್ಯಮಂತ್ರಿ ಪದಕ ಸಹ ದೊರೆತಿದೆ. ಅವರು ಯಲ್ಲಾಪುರದಲ್ಲಿ ಸೇವೆ ಸಲ್ಲಿಸುವಾಗಲೇ ಅವರ ಸಾಧನೆಗೆ ಸನ್ಮಾನ ದೊರೆತಿರುವುದರಿಂದ ಇಲ್ಲಿನ ಪೊಲೀಸ್ ಠಾಣೆಯ ಹಿರಿಮೆಯೂ ಹೆಚ್ಚಾಗಿದೆ.
ಯಲ್ಲಾಪುರದ ಜಾತ್ರೆ ಅವಧಿಯಲ್ಲಿಯೇ ರಮೇಶ ಹಾನಾಪುರ ಅವರ ವರ್ಗಾವಣೆ ಆದೇಶ ಬಂದಿತ್ತು. ಆದರೆ, ಅವರಿಗೆ ಸ್ಥಳ ನಿಯುಕ್ತಿ ಆಗಿರಲಿಲ್ಲ. ಜೊತೆಗೆ ಅದಾದ ನಂತರ ಯಲ್ಲಾಪುರದಲ್ಲಿ ನಡೆದ ಕೆಲ ಬೆಳವಣಿಗಳು ಆಡಳಿತ ಹಿತದೃಷ್ಠಿ ಕಾರಣದಿಂದ ರಮೇಶ ಹಾನಾಪುರ ಅವರನ್ನು ಇಲ್ಲಿಯೇ ಉಳಿಸಿಕೊಂಡವು. ಬುಧವಾರ ರಮೇಶ ಹಾನಾಪುರ ಅವರು ಮುಂಡಗೋಡು ಪಿಐ ಆಗಿ ಕರ್ತವ್ಯ ನಿಭಾಯಿಸುವಂತೆ ಸರ್ಕಾರದಿಂದ ಸೂಚನೆ ಬಂದಿದ್ದು, ಗುರುವಾರ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ವಿದಾಯ ಹೇಳಿದರು. ತಮ್ಮ ಕಚೇರಿಯಿಂದ ಹೊರ ಹೋಗುತ್ತಿದ್ದ ರಮೇಶ ಹಾನಾಪುರ ಅವರನ್ನು ಪೊಲೀಸ್ ಸಿಬ್ಬಂದಿ ಸುತ್ತುವರೆದರು. ಕೈಯಲ್ಲಿದ್ದ ಹೂವುಗಳಿಂದ ಭಾರೀ ಪ್ರಮಾಣದ ಮಳೆ ಸುರಿಸಿದರು. ಎರಡುವರೆ ವರ್ಷಗಳ ಕಾಲ ಅವರ ಜೊತೆ ಮಾಡಿದ ಕೆಲಸವನ್ನು ಸ್ಮರಿಸಿ, ಭಾವನಾತ್ಮಕವಾಗಿ ಬೀಳ್ಕೊಟ್ಟರು.