ಯಲ್ಲಾಪುರದ ಇಡಗುಂದಿ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಅನಾಥೆಯನ್ನು ಸ್ಥಳೀಯರು ಸಿದ್ದಾಪುರದ ಪುನೀತರಾಜಕುಮಾರ ಆಶ್ರಯಧಾಮಕ್ಕೆ ಸೇರಿಸಿದ್ದಾರೆ. ಅಣ್ಣನ ಮನೆಯಿಂದ ಹೊರದಬ್ಬಲ್ಪಟ್ಟ ಸರಸ್ವತಿ ಭಟ್ಟ ಅವರು ಆಶ್ರಮದಲ್ಲಿಯೇ ಮುಂದಿನ ಬದುಕು ಕಳೆಯಲು ನಿರ್ಧರಿಸಿದ್ದಾರೆ.
ಯಲ್ಲಾಪುರ ಬಾಳಗಿಮನೆ ಬಳಿಯ ಸಿಂಗನಮನೆಯ ಸರಸ್ವತಿ ಮಹಾಬಲೇಶ್ವರ ಭಟ್ಟ ಅವರು ವಾಸವಾಗಿದ್ದರು. ಪತಿ ಹಾಗೂ ಮಗನ ಮರಣದ ನಂತರ ಅವರು ಅನಾಥರಾದರು. ಇಡಗುಂದಿಯಲ್ಲಿ ಸರಸ್ವತಿ ಭಟ್ಟ ಅವರ ಅಣ್ಣನ ಮನೆಯಿದ್ದು, ಅಲ್ಲಿ ಆಶ್ರಯ ಕೇಳಿ ಹೋಗಿದ್ದರು. ಆದರೆ, ಅಣ್ಣನ ಮನೆಯವರು ವೃದ್ಧೆ ಸರಸ್ವತಿ ಭಟ್ಟ ಅವರನ್ನು ಅಲ್ಲಿಂದ ಹೊರದಬ್ಬಿದ್ದರು. ಅದಾದ ನಂತರ ಗುಳ್ಳಾಪುರದ ಮನೆಯೊಂದರಲ್ಲಿ ಅವರು ಮನೆ ಕೆಲಸ ಮಾಡಿಕೊಂಡಿದ್ದರು. ವಯಸ್ಸಾದ ಕಾರಣ ಮನೆ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಂದಿದ್ದು, ಆ ಮನೆಯವರು ಸರಸ್ವತಿ ಭಟ್ಟ ಅವರನ್ನು ಹೊರಗೆ ಹಾಕಿದ್ದರು. ಹೀಗಾಗಿ ಇಡಗುಂದಿ ಬಸ್ ನಿಲ್ದಾಣದ ಬಳಿ ಅವರು ವಾಸವಾಗಿದ್ದು, ವಾಹನಕ್ಕೆ ಸಿಲುಕಿ ಅಪಘಾತಕ್ಕೀಡಾಗುವ ಪರಿಸ್ಥಿತಿಯಲ್ಲಿದ್ದರು.
ಪೊಲೀಸರು ಆ ವೃದ್ಧ ಮಹಿಳೆಯನ್ನು ವಿಚಾರಿಸಿದ್ದು, ಸಂಬoಧಿಕರು ಯಾರೂ ಸಮೀಪದಲಿಲ್ಲ ಎಂಬುದು ಅರಿವಾಯಿತು. `ಯಲ್ಲಾಪುರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಅವರನ್ನು ಪುನೀತ್ ರಾಜಕುಮಾರ ಆಶ್ರಯಧಾಮಕ್ಕೆ ಸೇರಿಸಲಾಗಿದ್ದು, ಶೇಡಿಕೆರೆಯ ನಾಗೇಂದ್ರ ಭಟ್ಟ ಶಿವರಂಜಿನಿ ಅವರು ಈ ಕೆಲಸಕ್ಕೆ ನೆರವಾಗಿದ್ದಾರೆ’ ಎಂದು ಆಶ್ರಮದ ನಾಗರಾಜ ನಾಯಕ ಅವರು ಹೇಳಿದ್ದಾರೆ.