ಶಿರಸಿಯ ಕಲಗಾರಒಡ್ಡದಲ್ಲಿ ಕಳೆದ 12 ವರ್ಷಗಳಿಂದ ಚಂದ್ರಶೇಖರ ಭಟ್ಟ ಅವರು `ಗಾನ ವೈಭವ’ ಆಯೋಜಿಸುತ್ತ ಬಂದಿದ್ದು, ಕಳೆದ ಎರಡು ವರ್ಷಗಳಿಂದ ಅವರ ಕುಟುಂಬದವರೇ ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ವರ್ಷ ಯಕ್ಷಗಾನ ಆಯೋಜನೆ ವಿಷಯವಾಗಿ ಕುಟುಂಬದವರ ನಡುವೆ ದೊಡ್ಡ ಯುದ್ದವೇ ನಡೆದಿದೆ. ಯುದ್ಧದಲ್ಲಿ ಪೊರಕೆ-ಚಪ್ಪಲಿ-ದೊಣ್ಣೆಗಳ ಪ್ರಯೋಗವೂ ಆಗಿದೆ!
ಮೇ 9ರಂದು ಶಿರಸಿಯ ಕಲಗಾರಒಡ್ಡದಲ್ಲಿ ಮಹಿಳೆಯರ ನಡುವೆ ಮಾರಾಮಾರಿ ನಡೆದಿದ್ದು, ಅಡ್ಡ ಬಂದ ಪುರುಷರಿಗೂ ಒದೆ ಬಿದ್ದಿದೆ. ಇದರ ವಿಡಿಯೋ ಸಹ ಎಲ್ಲಡೆ ವೈರಲ್ ಆಗಿದೆ. ಅದರ ಬೆನ್ನಲ್ಲೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎರಡು ಕಡೆಯವರ ದೂರು ಆಲಿಸಿದ ಪೊಲೀಸರು ವಿವಿಧ ಸಾಕ್ಷಿಗಳ ಆಧಾರದಲ್ಲಿ ತನಿಖೆ ಶುರು ಮಾಡಿದ್ದಾರೆ. `ಚಂದ್ರಶೇಖರ ಭಟ್ಟ ಹಾಗೂ ಮಂಜುನಾಥ ಭಟ್ಟ ಅವರು ಸಹೋದರರಾಗಿದ್ದು, ಒಂದೇ ಮನೆಯಲ್ಲಿ ಪ್ರತ್ಯೇಕ ಅಡುಗೆ ಮಾಡಿ ವಾಸಿಸುತ್ತಿದ್ದಾರೆ. ಮನೆ ಅಂಗಳದಲ್ಲಿ ನಡೆಸುವ ಯಕ್ಷಗಾನ ಕಾರ್ಯಕ್ರಮಕ್ಕೆ ಮಂಜುನಾಥ ಭಟ್ಟ ಅವರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಚಂದ್ರಶೇಖರ ಭಟ್ಟ ಅವರ ಪತ್ನಿ ನೇತ್ರಾವತಿ ಭಟ್ಟ ಅವರು ದೂರಿದ್ದಾರೆ. ಇದೇ ವಿಷಯವಾಗಿ ನಡೆದ ಹೊಡೆದಾಟದಲ್ಲಿ ಈ ಬಾರಿ ಯಲ್ಲಾಪುರ ಹಿತ್ಲಳ್ಳಿಯ ರಶ್ಮಿ ಗೋಪಾಲಕೃಷ್ಣ ಹೆಗಡೆ, ಗೋಪಾಲಕೃಷ್ಣ ಸುಬ್ರಹ್ಮಣ್ಯ ಹೆಗಡೆ ಅವರು ಕೈ ಜೋಡಿಸಿದ್ದಾರೆ. `ಭಾರತಿ ಮಂಜುನಾಥ ಭಟ್ಟ ಹಾಗೂ ರಜನಿ ಮಂಜುನಾಥ ಭಟ್ಟ ಅವರು ಸಹ ತಮ್ಮ ಮೇಲೆ ಕೈ ಮಾಡಿದ್ದಾರೆ’ ಎಂದು ನೇತ್ರಾವತಿ ಭಟ್ಟ ಅವರು ಅಳಲು ತೋಡಿಕೊಂಡಿದ್ದಾರೆ.
`ಕಳೆದ ವರ್ಷವೂ ಕಾರ್ಯಕ್ರಮಕ್ಕೆ ಅಡ್ಡಿ-ಆತಂಕ ನಡೆಸಿದಾಗ ಬೇರೆ ಕಡೆ ಗಾನ ವೈಭವ ನಡೆದಿತ್ತು. ಈ ಸಲ ಮೇ 10ರಂದು ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದಾಗ ಗೋಪಾಲಕೃಷ್ಣ ಭಟ್ಟ ಹಾಗೂ ರಶ್ಮೀ ಭಟ್ಟ ಅವರು ಅಡ್ಡಿಪಡಿಸಿದರು. ಮಂಜುನಾಥ ಭಟ್ಟ ಹಾಗೂ ಭಾರತಿ ಭಟ್ಟ ಅವರು ಆಗಮಿಸಿ ಗಲಾಟೆ ಮಾಡಿದ್ದು, ಭಾರತಿ ಭಟ್ಟ ಅವರು ಚಪ್ಪಲಿಯಿಂದ ಹೊಡೆದಿದ್ದಾರೆ’ ಎಂದು ನೇತ್ರಾವತಿ ಭಟ್ಟ ಅವರು ದೂರಿದ್ದಾರೆ. `ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಊಟ ಬಡಿಸಲು ಸಿದ್ಧಪಡಿಸಿದ ಜಾಗದಲ್ಲಿ ಕೋಳಿ ಗೊಬ್ಬರ ದಾಸ್ತಾನು ಮಾಡಿ ಗಲೀಜು ಮಾಡಿದ್ದಾರೆ. ಪ್ರಶ್ನಿಸಿದ ಕಾರಣ ಮಂಜುನಾಥ ಭಟ್ಟ ಅವರು ತಮ್ಮ ಚೂಡಿದಾರ ಹರಿದಿದ್ದಾರೆ’ ಎಂದು ಸಹ ನೇತ್ರಾವತಿ ಭಟ್ಟ ಅವರು ದೂರಿದ್ದಾರೆ.
ಈ ಹೊಡೆದಾಟದಲ್ಲಿ ಮಂಜುನಾಥ ಗಣಪತಿ ಭಟ್ಟ ಅವರು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಿಂದಲೇ ಪೊಲೀಸ್ ದೂರು ನೀಡಿದ ಅವರು `ಚಂದ್ರಶೇಖರ ಭಟ್ಟ ಹಾಗೂ ನೇತ್ರಾವತಿ ಭಟ್ಟ ಅವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ದೊಣ್ಣೆಯಿಂದ ಹೊಡೆದಿದ್ದಾರೆ. ಗೊಬ್ಬರ ಇಳಿಸಲು ಕೊಟ್ಟಿಲ್ಲ’ ಎಂದು ದೂರಿದ್ದಾರೆ. `ವಯಸ್ಸಾದ ಕಾರಣ ದೊಡ್ಡದಾಗಿ ಧ್ವನಿ ವರ್ಧಕ ಬಳಸಬೇಡಿ’ ಎಂದಿದ್ದಕ್ಕೆ ಈ ರೀತಿ ಹಲ್ಲೆ ಮಾಡಲಾಗಿದೆ. ತನ್ನೊಂದಿಗೆ ಪತ್ನಿ ಭಾರತಿ ಭಟ್ಟ ಅವರ ಮೇಲೆಯೂ ದಾಳಿ ನಡೆದಿದೆ’ ಎಂದವರು ವಿವರಿಸಿದ್ದಾರೆ. ಎರಡು ಕಡೆಯವರ ದೂರು ಆಲಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.