ಕಾರವಾರದ ಸಾಯಿ ಮಂದಿರದ ಎದುರು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಒಟ್ಟು 10 ಜನ ಸೇರಿ ಇಲ್ಲಿ ಹೊಡೆದಾಡಿಕೊಂಡಿದ್ದಾರೆ.
ಕಾರವಾರ ನಗರದ ಸಾಯಿಕಟ್ಟಾ ಬಳಿಯಿರುವ ಸಾಯಿ ಮಂದಿರದ ಮುಂದೆ ಈ ಗಲಾಟೆ ನಡೆದಿದೆ. ಮೇ 8ರ ಬೆಳಗ್ಗೆ 11.30ರ ಅವಧಿಯಲ್ಲಿ ಶಾಂತಿ ಭಂಗ ನಡೆದ ಬಗ್ಗೆ ಆ ಭಾಗದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಗುರು ಗಾಂವಕಾರ್ ಅವರು ಅಲ್ಲಿ ಹೋಗಿ ನೋಡಿದ್ದಾರೆ. ಈ ವೇಳೆ ಎರಡು ಗುಂಪುಗಳಲ್ಲಿ 10 ಜನ ಸೇರಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದಾರೆ. ಆ ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರೂ ಆ ಕ್ಷಣಕ್ಕೆ ಪ್ರಯೋಜನವಾಗಿಲ್ಲ.
ಕೋಡಿಭಾಗ ಸಾಯಿಕಟ್ಟಾದ ವಿದ್ಯಾಧರ ಸುರೇಶ್ ಮೇತ್ರಿ, ಕೃಷ್ಣಾನಂದ ನಾರಾಯಣ ನಾಯ್ಕ, ಜಗದೀಶ ಶಾಂತರಾಮ ನಾಯ್ಕ, ಸಂಜಯ ಪ್ರಭಾಕರ ನಾಯ್ಕ, ಓಂಕಾರ ವಾಸುದೇವ ನಾಯ್ಕ, ಸಾಯಿಕಿರಣ ರವೀಂದ್ರ ಪಂಚೇಕರ್, ರೋಹನ ದಿನಕರ ನಾಯ್ಕ, ವೈಭವ ಉಲ್ಲಾಸ್ ಕುಡ್ತರಕರ್ ಜೊತೆ ಸರ್ವೋದಯ ನಗರದ ವಿಜಯ ಬಾಬು ಮೊಗೇರ್ ಹಾಗೂ ಮಾಲಾದೇವಿ ಮೈದಾನ ಬಳಿಯ ವೇದ ವಿನಯ ಪಾವಸ್ಕರ್ ಅವರು ಈ ಹೊಡೆದಾಟದಲ್ಲಿ ಭಾಗಿಯಾಗಿದ್ದಾರೆ. ಅವರಲ್ಲಿನ ಹೊಡೆದಾಟಕ್ಕೆ ಕಾರಣ ಏನು? ಎಂಬುದು ಗೊತ್ತಾಗಿಲ್ಲ. ಆದರೆ, ಆ ಗಲಾಟೆ ನೋಡಿದ ಜನ ಆತಂಕಕ್ಕೆ ಒಳಗಾಗಿದ್ದು, ತಮಗಾದ ತೊಂದರೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾರೆ.