ಹೊನ್ನಾವರ ಹೊಸಕುಳಿಯ ಪ್ರವೀಣ ನಾಯ್ಕ ಅವರು ಸಂತೆಗುಳಿಯಲ್ಲಿ ಪಶು ಸಖಿಯಾಗಿರುವ ದಿವ್ಯಾ ಮುಕ್ರಿ ಅವರ ಬೆನ್ನು ಬಿದ್ದಿದ್ದಾರೆ. ನಿತ್ಯವೂ ದಿವ್ಯಾ ಮುಕ್ರಿ ಅವರನ್ನು ಹಿಂಬಾಲಿಸುವ ಪ್ರವೀಣ ನಾಯ್ಕ ಅವರು `ಫೋನ್ ನಂ ಕೊಡು’ ಎಂದು ಕಾಡಿಸುತ್ತಿದ್ದಾರೆ. ಈ ವಿಷಯವನ್ನು ದಿವ್ಯಾ ಮುಕ್ರಿ ಅವರು ಪತಿ ಗಣಪತಿ ಮುಕ್ರಿ ಅವರ ಬಳಿ ಹೇಳಿದ್ದು, ಪ್ರಶ್ನಿಸಿದ ಗಣಪತಿ ಮುಕ್ರಿ ಅವರ ಕೈಗೆ ಪ್ರವೀಣ ನಾಯ್ಕ ಅವರು ಕಚ್ಚಿ ಗಾಯ ಮಾಡಿದ್ದಾರೆ!
ಹೊನ್ನಾವರದ ಹೊಸಾಕುಳಿ ಬಳಿಯ ಶಶಿಹಿತ್ಲುವಿನ ಗಣಪತಿ ಮಾಸ್ತಿ ಮುಕ್ರಿ ಅವರು ವಾಸವಾಗಿದ್ದಾರೆ. ರೈತರಾಗಿರುವ ಅವರು ವ್ಯಾಪಾರ ಹಾಗೂ ಕಟ್ಟಡ ಕಾರ್ಮಿಕ ಕೆಲಸವನ್ನು ಮಾಡಿಕೊಂಡಿದ್ದಾರೆ. ಅವರ ಪತ್ನಿ ದಿವ್ಯಾ ಮುಕ್ರಿ ಅವರು ಸಂತೆಗುಳಿಯಲ್ಲಿ ಪಶು ಸಖಿ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಹೊನ್ನಾವರ ಹೊಸಾಕುಳಿ ಬಳಿಯ ಮೂಡರೆಯ ಪ್ರವೀಣ ನಾಗೇಶ ನಾಯ್ಕ ಅವರು ದಿವ್ಯಾ ಮುಕ್ರಿ ಅವರು ಕೆಲಸ ಮಾಡುವ ಸ್ಥಳ ನೋಡಿದ್ದಾರೆ. ಅದಾದ ನಂತರ ನಿತ್ಯವೂ ದಿವ್ಯಾ ಮುಕ್ರಿ ಅವರು ಓಡಾಡುವ ಕಡೆ ತಿರುಗಾಡುತ್ತಿದ್ದು, ದಿವ್ಯಾ ಮುಕ್ರಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಜೊತೆಗೆ ಅನಗತ್ಯವಾಗಿ ದಿವ್ಯಾ ಮುಕ್ರಿ ಅವರನ್ನು ಮಾತನಾಡಿಸುತ್ತಿದ್ದಾರೆ. ಈಚೆಗೆ `ನಿನ್ನ ಫೋನ್ ನಂ ಕೊಡು’ ಎಂದು ಸಹ ಪ್ರವೀಣ ನಾಯ್ಕ ಅವರು ಕೇಳಿದ್ದಾರೆ.
ಪ್ರವೀಣ ನಾಯ್ಕ ಅವರಿಂದ ಆಗುವ ಮಾನಸಿಕ ಹಿಂಸೆಯ ಬಗ್ಗೆ ದಿವ್ಯಾ ಮುಕ್ರಿ ಅವರು ಪತಿಯಲ್ಲಿ ಹೇಳಿದ್ದಾರೆ. `ಆತ ಸಿಕ್ಕಾಗ ನೋಡೋಣ’ ಎಂದು ಗಣಪತಿ ಮುಕ್ರಿ ಅವರು ಸುಮ್ಮನಾಗಿದ್ದಾರೆ. ಏಪ್ರಿಲ್ 28ರ ರಾತ್ರಿ ಸಂತೆಗುಳಿ ಅಂಗಡಿ ಮಾರ್ಗವಾಗಿ ಗಣಪತಿ ಮುಕ್ರಿ ಅವರು ಮನೆಗೆ ಮರಳುವಾಗ ಅಲ್ಲಿನ ಬಸ್ ನಿಲ್ದಾಣದ ಬಳಿ ಪ್ರವೀಣ ನಾಯ್ಕ ಅವರನ್ನು ನೋಡಿದ್ದಾರೆ. ಅವರಲ್ಲಿ ಹೋದ ಗಣಪತಿ ಮುಕ್ರಿ ಅವರು `ಪತ್ನಿಗೆ ತೊಂದರೆ ಕೊಡಬೇಡ. ಫೋನ್ ನಂ ಕೇಳಬೇಡ’ ಎಂದು ಸೂಚಿಸಿದ್ದಾರೆ. ಸಿಟ್ಟಿನಿಂದ ಪ್ರವೀಣ ನಾಯ್ಕ ಅವರು ಏಕಾಏಕಿ ಆಕ್ರಮಣ ನಡೆಸಿದ್ದು, ಗಣಪತಿ ಮುಕ್ರಿ ಅವರ ಎಡಗೈಗೆ ಬಾಯಿ ಹಾಕಿದ್ದಾರೆ. ಹೆಬ್ಬರಳು ಕಚ್ಚಿ ನೋವು ಮಾಡಿದ ಅವರು ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬಿಸಾಡಿದ್ದಾರೆ.
ಪ್ರವೀಣ ನಾಯ್ಕ ಅವರು ಮೊದಲಿನಿಂದಲೂ ಕ್ರೂರ ಸ್ವಭಾವದವರಾಗಿದ್ದು, ನಿತ್ಯವೂ ಒಂದಿಲ್ಲೊAದು ಗಲಾಟೆ ಮಾಡುತ್ತಿರುವುದು ಈ ವೇಳೆ ಗಣಪತಿ ಮುಕ್ರಿ ಅವರಿಗೆ ನೆನಪಾಗಿದೆ. ಜನ ಬಲ, ಹಣ ಬಲದ ಜೊತೆ ರಾಜಕೀಯ ಬೆಂಬಲವಿರುವ ಪ್ರವೀಣ ನಾಯ್ಕ ಅವರ ಬೆದರಿಕೆಯಿಂದ ಗಣಪತಿ ಮುಕ್ರಿ ಅವರು ಕಂಗಾಲಾಗಿದ್ದಾರೆ. ಈ ವೇಳೆ ದೇವರಾಜ ಮುಕ್ರಿ ಅವರು ಅಲ್ಲಿಗೆ ಬರುವುದನ್ನು ನೋಡಿ ಪ್ರವೀಣ ನಾಯ್ಕ ಅವರು ಪರಾರಿಯಾಗಿದ್ದು, ಗಾಯಗೊಂಡ ಗಣಪತಿ ಮುಕ್ರಿ ಅವರು ಆಸ್ಪತ್ರೆ ಸೇರಿದ್ದಾರೆ. ಜೊತೆಗೆ, ರಕ್ಷಣೆ ಕೋರಿ ಪೊಲೀಸರಿಗೂ ಪತ್ರ ಬರೆದಿದ್ದಾರೆ.