ಅರಣ್ಯ ಅತಿಕ್ರಮಣ ಸಕ್ರಮಗೊಳಿಸುವ ವಿಷಯವಾಗಿ ತಲೆದೂರಿರುವ ಎಲ್ಲಾ ಗೊಂದಲ ಬಗೆಹರಿಸುವುದಕ್ಕಾಗಿ ಹೋರಾಟ ಪ್ರಮುಖರ ಜೊತೆ ಉನ್ನತಾಧಿಕಾರದ ಸಭೆ ನಡೆಸಲು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ನಿರ್ಧರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರಿಗೆ ಮಂಕಾಳು ವೈದ್ಯ ಅವರು ಈ ಬಗೆಯ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಚಂದ್ರಕಾoತ ಕೋಚ್ರೇಕರ್ ಅವರು ಹೊನ್ನಾವರದಲ್ಲಿ ಮಂಕಾಳು ವೈದ್ಯ ಅವರನ್ನು ಭೇಟಿಯಾಗಿ ಗೊಂದಲಗಳ ಬಗ್ಗೆ ಚರ್ಚಿಸಿದರು. ಆಗ, ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಜಂಟಿ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು. ಆ ಸಭೆಯ ಮೂಲಕ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಪ್ರಕ್ರಿಯೆಯಲ್ಲಿನ ಗೊಂದಲಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.
`ಈ ಹಿಂದೆ ತಿರಸ್ಕ್ರತಗೊಂಡಿರುವ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಪುನರ್ ಪರಿಶಿಲನೆ ನಡೆಸಲು ಉಚ್ಚ ನ್ಯಾಯಾಲಯ ಮತ್ತು ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣ ಸಮಿತಿ ಆದೇಶ ಮಾಡಿದರೂ ಸಹ ಅನುಷ್ಠಾನ ಪ್ರಕ್ರಿಯೆಯಲ್ಲಿ ಗೊಂದಲವಾಗುತ್ತಿದೆ. ಪರಿಣಾಮ ಬಹುತೇಕ ಅರ್ಜಿಗಳು ತಿರಸ್ಕಾರವಾಗಿದ್ದು, ಜನರ ಆಕ್ರೋಶ ಹೆಚ್ಚಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ನೀಡಿದ ಪರಿಣಾಮ ಅರಣ್ಯ ಭೂಮಿಯಲ್ಲಿನ ಸಾಗುವಳಿ ಸ್ಥಳದ ಮಹಜರು ನಡೆಸಲು ಮತ್ತು ತಿರಸ್ಕಾರವಾಗಿರುವ ಅರ್ಜಿಗಳ ಪುನರ್‌ಪರಿಶೀಲನೆ ನಡೆಸಲು ನಿರ್ದೇಶನ ಸಿಕ್ಕಿದೆ. ಆದರೆ, ಸ್ಥಳದಲ್ಲಿನ ಸಾಂದರ್ಭಿಕ ಸಾಕ್ಷಿಗಳನ್ನು ಗುರುತಿಸಿ, ಅರ್ಜಿಗಳ ಪುನರಪರಿಶೀಲನೆಯ ಸಂದರ್ಭದಲ್ಲಿ ಮಹಜರು ದೃಢೀಕರಣ ಪುರಾವೆಯಾಗಿ ಪರಿಗಣಿಸಿ ಭೂಮಿ ಹಕ್ಕು ನೀಡಲು ಸೂಚಿಸಿದರೂ ಅದರ ವ್ಯತಿರಿಕ್ತವಾಗಿ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ಚಂದ್ರಕಾ0ತ ಕೋಚ್ರೇಕರ್ ಅವರು ದೂರಿದರು.
ಹೋರಾಟ ಸಮಿತಿಯ ಪ್ರಮುಖರಾದ ಶ್ರೀಧರ ಶೆಟ್ಟಿ ಹಿರೇಬೈಲ, ವಾಮನ ನಾಯ್ಕ ಮಂಕಿ, ಅಶ್ಫಕ್ ಶೇಖ್, ಶ್ರೀಕಾಂತ ನಾಯ್ಕ ಗುಂಡಿಬೈಲ, ಮಂತು ಫರ್ನಾಂಡಿಸ್ ಜನಕಡ್ಕಲ್, ಪ್ರಮುಖರಾದ ಗೋವಿಂದ ಎಸ್ ನಾಯ್ಕ, ಸಂಕೇತ ನಾಯ್ಕ ಇತರರು ಇದ್ದರು.