ಕುಮಟಾದ ಸುಮಿತ್ರಾ ನಾಯ್ಕ ಅವರು ತಲೆದಿಂಬಿನ ಅಡಿಯಿರಿಸಿದ್ದ 300ರೂ ಕಳ್ಳತನವಾಗಿದೆ. ಆ ಹಣದ ಬಗ್ಗೆ ಅವರು ಮೊಮ್ಮಕ್ಕಳ ಬಳಿ ವಿಚಾರಿಸಿದ್ದು, ಮೂವರು ಮೊಮ್ಮಕ್ಕಳು ಅಜ್ಜಿಯ ಕೆನ್ನೆಗೆ ಬಾರಿಸಿ, ಕಾಲಿನಿಂದ ಒದ್ದು ನೋವುಂಟು ಮಾಡಿದ್ದಾರೆ. ನೋವಿನಿಂದ ಬಳಲಿದ ಅಜ್ಜಿ ಚಿಕಿತ್ಸೆಗಾಗಿ ಸಾವಿರ ರೂ ಖರ್ಚು ಮಾಡಿದ್ದಾರೆ.
ಕುಮಟಾದ ಗೂಡ ಕಗಾಲದಲ್ಲಿ ಸುಮಿತ್ರಾ ಪಾಂಡು ನಾಯ್ಕ ಅವರು ವಾಸವಾಗಿದ್ದಾರೆ. ತಾವು ಕೂಡಿಟ್ಟ 300ರೂ ಹಣವನ್ನು ಅವರು ತಲೆದಿಂಬಿನ ಅಡಿ ಜೋಪಾನವಾಗಿರಿಸಿಕೊಂಡಿದ್ದು, ಆ ಹಣ ಸದ್ಯ ಕಳ್ಳತನವಾಗಿದೆ. ರಾತ್ರಿ ವೇಳೆ ಸುಮಿತ್ರಾ ನಾಯ್ಕ ಅವರು ಶೌಚಾಲಯಕ್ಕೆ ಹೋಗಿ ಮರಳಿ ಬಂದು ನೋಡಿದಾಗ ಹಣ ಕಾಣೆಯಾಗಿರುವುದು ಗೊತ್ತಾಗಿದೆ. ತಾವು ದುಡಿದು ಕೂಡಿಟ್ಟ ಹಣ ಕಾಣೆಯಾಗಿದ್ದರಿಂದ ಅವರು ಮೊಮ್ಮಕ್ಕಳಾದ ಕವನ ಶ್ರೀಧರ ನಾಯ್ಕ, ಮಹಿಮಾ ಶ್ರೀಧರ ನಾಯ್ಕ ಹಾಗೂ ಕರುಣಾ ಶ್ರೀಧರ ನಾಯ್ಕ ಅವರ ಮೇಲೆ ಅನುಮಾನವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುಮಿತ್ರಾ ನಾಯ್ಕ ಅವರು ಮೊದಲು ಕವನ ನಾಯ್ಕ ಅವರನ್ನು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಾದ ಕವನ ನಾಯ್ಕ ಅವರು ಕೂಡಲೇ ಸುಮಿತ್ರಾ ನಾಯ್ಕ ಅವರ ಕೆನ್ನೆಗೆ ಹೊಡೆದಿದ್ದಾರೆ. ಅದಾದ ನಂತರ ಮಹಿಮಾ ನಾಯ್ಕ ಹಾಗೂ ಕರುಣಾ ನಾಯ್ಕ ಅವರು ಸೇರಿ ಸುಮಿತ್ರಾ ನಾಯ್ಕ ಅವರಿಗೆ ಕಾಲಿನಿಂದ ಒದ್ದಿದ್ದಾರೆ. ಅವರೆಲ್ಲ ಸೇರಿ ಸುಮಿತ್ರಾ ನಾಯ್ಕ ಅವರ ತಲೆಗೂ ಹೊಡೆದಿದ್ದು, ಈ ವೇಳೆ ಆ ಮೂರು ಮಕ್ಕಳ ತಾಯಿ ಯಶೋಧಾ ನಾಯ್ಕ ಅವರು ಅಲ್ಲಿಗೆ ಆಗಮಿಸಿ ಜಗಳ ಬಿಡಿಸದ್ದಾರೆ. ಆದರೆ, ಯಶೋಧಾ ನಾಯ್ಕ ಅವರು ಮಕ್ಕಳಿಗೆ ಬುದ್ದಿ ಹೇಳುವ ಬದಲು ಸುಮಿತ್ರಾ ನಾಯ್ಕ ಅವರಿಗೆ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ.
ತಾಯಿ ಮೇಲೆ ನಡೆದ ಆಕ್ರಮಣದ ಬಗ್ಗೆ ನಿವೃತ್ತ ಕಂಡೆಕ್ಟರ್ ನಾಗೇಶ ಪಾಂಡು ನಾಯ್ಕ ಅವರಿಗೆ ಗೊತ್ತಾಗಿದೆ. ಚಿಲ್ಲರೆ ಕಾಸಿಗಾಗಿ ಈ ಪ್ರಮಾಣದಲ್ಲಿ ಹೊಡೆದಾಟ ನಡೆಸಿದ ತಮ್ಮನ ಕುಟುಂಬದವರ ವಿರುದ್ಧ ನಾಗೇಶ ನಾಯ್ಕ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ಶ್ರೀಧರ ನಾಯ್ಕ ಅವರ ಮಕ್ಕಳಿಂದ ತಾಯಿ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಕುಮಟಾ ಪೊಲೀಸರು ತನಿಖೆ ನಡೆಸಿದ್ದಾರೆ. 300ರೂ ಕದ್ದ ವಿಚಾರ ಪ್ರಶ್ನಿಸಿ ದಾಳಿಗೆ ಒಳಗಾದ ಅಜ್ಜಿಯ ಚಿಕಿತ್ಸೆಗೆ ಸಾವಿರ ರೂ ವೆಚ್ಚವಾಗಿದೆ.