ಅಬ್ದುಲ್ ರಫೀಕ್ ಎಂಬಾತರು ಅಬಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡು ಜೊಯಿಡಾ-ದಾಂಡೇಲಿ ಭಾಗದಲ್ಲಿ ಓಡಾಡುತ್ತಿದ್ದಾರೆ. ಆದರೆ, ಅವರು ಸರ್ಕಾರಿ ಸಿಬ್ಬಂದಿಯೂ ಅಲ್ಲ. ಅಬಕಾರಿ ಅಧಿಕಾರಿಯೂ ಆಗಿಲ್ಲ.
ಮೇ 10ರಂದು ಅಬ್ದುಲ್ ರಫೀಕ್ ಅವರು ಜೊಯಿಡಾದ ಅಪ್ಪು ಹೊಟೇಲ್ ಬಳಿ ಬಂದಿದ್ದಾರೆ. `ನಾನು ದಾಂಡೇಲಿ ಅಬಕಾರಿ ಇಲಾಖೆ ಅಧಿಕಾರಿ’ ಎಂದು ಪರಿಚಯಿಸಿಕೊಂಡಿದ್ದಾರೆ. `ಈ ಹೊಟೇಲಿನಲ್ಲಿ ಅಕ್ರಮ ಸರಾಯಿ ಮಾರಾಟ ನಡೆದಿದೆ. ನಾನು ಚೆಕ್ ಮಾಡಬೇಕು’ ಎಂದಿದ್ದಾರೆ. ಕುಂಬಾರವಾಡ ಮೈನೋಳದ ವಿಶ್ವನಾಥ ತುಳಿಯೋ ಗಾವಡಾ ಅವರು ಹೊಟೇಲ್ ತಪಾಸಣೆಗೆ ಅನುಮತಿ ನೀಡಿದ್ದಾರೆ. ಎಲ್ಲಾ ಸಾಮಗ್ರಿಗಳನ್ನು ಚಲ್ಲಾಪಿಲ್ಲಿಯಾಗಿಸಿದ ಅಬ್ದುಲ್ ರಫೀಕ್ ಅವರು ಏನೂ ಸಿಗದೇ ಅಲ್ಲಿಂದ ಮರಳಿದ್ದಾರೆ.
ಅದಾದ ನಂತರ ಅಬ್ದುಲ್ ರಫೀಕ್ ಮೇಲೆ ಅಲ್ಲಿನವರಿಗೆ ಅನುಮಾನ ಶುರುವಾಗಿದೆ. ವಿಶ್ವನಾಥ ಗಾವಡಾ ಅವರ ಜೊತೆ ಸಂದೀಪ ನಾಯ್ಕ, ಮುರಳಿ ಗಾವಡಾ ಸೇರಿ ವಿಚಾರಣೆ ನಡೆಸಿದ್ದಾರೆ. ಹೊಟೇಲ್ ಪಕ್ಕದ ಗ್ಯಾರೇಜ್ ಹಾಗೂ ಇನ್ನಿತರ ಅಂಗಡಿಯಲ್ಲಿಯೂ ಇದೇ ರೀತಿ ಅಬ್ದುಲ್ ರಫೀಕ್ ಶೋಧ ನಡೆಸಿರುವುದು ಗೊತ್ತಾಗಿದೆ. ಜನ ಸೇರಿ ಪ್ರಶ್ನಿಸಿದಾಗ ಅಬ್ದುಲ್ ರಫೀಕ್ ಸ್ಕೂಟಿಯಲ್ಲಿ ಪರಾರಿಯಾಗಿದ್ದಾರೆ. ಜನರನ್ನು ಮೋಸ ಮಾಡುವ ಉದ್ದೇಶದೊಂದಿಗೆ ಅಬ್ದುಲ್ ರಫೀಕ್ ಈ ರೀತಿ ವರ್ತಿಸಿದ ಅನುಮಾನವಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.