1989ರಲ್ಲಿ ಕುಮಟಾ ಬಾಡ-ಕಾಗಾಲದ ಲೋಕನಾಥ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ ಕಲಿತ ಮಕ್ಕಳೆಲ್ಲರೂ ಇದೀಗ ಮತ್ತೆ ಒಂದಾಗಿದ್ದು, ಬಾಡದ ಕಡಲತೀರದಲ್ಲಿ ಮಿಂದೆದ್ದಿದ್ದಾರೆ. ಅಲ್ಲಿನ ಡೇನಿಸನ್ ರೆಸಾರ್ಟಿನಲ್ಲಿ ಎಲ್ಲರೂ ಸೇರಿ ಹಳೆಯ ಗುರುಗಳ ಸೇವೆ ಸ್ಮರಿಸಿದ್ದಾರೆ. ಜೊತೆಗೆ 37 ವರ್ಷದ ಹಿಂದೆ ತಮಗೆ ಕಲಿಸಿದ ಶಿಕ್ಷಕರನ್ನು ಹುಡುಕಿ ಅವರನ್ನು ಗೌರವಿಸಿದ್ದಾರೆ.
ಲೋಕನಾಥ ಹೈಸ್ಕೂಲಿನ ನಿವೃತ್ತ ಮುಖ್ಯ ಶಿಕ್ಷಕ ಜಿ ಕೆ ಪಟಗಾರ, ಕುಸುಮಾ, ರಮಾ, ಯಶೋಧಾ, ತಾಂಡೇಲ್, ಕರೆಮನಿ, ಮೊದಲಾದ ಶಿಕ್ಷಕರನ್ನು ಗೌರವಿಸಿದ್ದಾರೆ. ಸದ್ಯ ಶಾಲೆಯ ಶಿಕ್ಷಕರಾದವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸದ ಕ್ಷಣ ಅನುಭವಿಸಿದ್ದಾರೆ. ಸನ್ಮಾನ ಸ್ವೀಕರಿಸಿದ ಗುರುಗಳು ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ, ಆರ್ಶೀರ್ವದಿಸಿದ್ದಾರೆ.
ಈ ವೇಳೆ ಹಳೆ ವಿದ್ಯಾರ್ಥಿ ಶಮಶುದ್ದೀನ ದಿಡಗೂರ ಗುರುವಂದನೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಹಳೆಯ ವಿದ್ಯಾರ್ಥಿ ಗಣಪತಿ ಭಂಡಾರಿ, ಜಯಂತ ಪಟಗಾರ, ನಾಗಪ್ಪಾ ಪಟಗಾರ, ಮಹಾಬಳೇಶ್ವರ ಬೀರಕೋಡಿ ಅವರು ತಾವು ಕಲಿತ ಶಾಲೆಯ ವಾತಾವರಣ ಸ್ಮರಿಸಿದ್ದಾರೆ. ಲೋಕನಾಥ ಹೈಸ್ಕೂಲ್ ಆಡಳಿತ ಮಂಡಳಿಯವರು ಹಾಜರಿದ್ದು, ಇಂಥ ಕಾರ್ಯಕ್ರಮ ಸಂಘಟಿಸಿದವರನ್ನು ಸನ್ಮಾನಿಸಿದ್ದಾರೆ.
ಕಾರ್ಯಕ್ರಮದ ಮುಖ್ಯ ಶಶಕಲಾ ಹಾಗೂ ದಿನೇಶ ಕಾರ್ಗಿಲ್ ಅವರ ಜೊತೆ ಸಾಧಕ ವಿದ್ಯಾರ್ಥಿಗಳು ಸನ್ಮಾನ ಸ್ವೀಕರಿಸಿದ್ದಾರೆ. ಕಾರವಾರದ ಸರ್ಕಾರಿ ಪ್ರಾಥಮ ದರ್ಜೆ ಕಾಲೇಜಿನ ಉಪನ್ಯಾಸಕ ಸತೀಶ ಬಿರಕೋಡಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಎಲ್ಲರನ್ನು ವಂದಿಸಿದರು.