ಶಿರಸಿಯ ಪತ್ರಕರ್ತರೊಬ್ಬರಿಗೆ ನಗರಸಭೆ ಮಾಜಿ ಸದಸ್ಯರೊಬ್ಬರು 3 ಲಕ್ಷ ರೂ ಸಾಲ ನೀಡಿದ್ದು, ಆ ಸಾಲಪಡೆಯಲು ಹರಸಾಹಸ ಮಾಡಿದ್ದಾರೆ. ಕೊನೆಗೆ ನ್ಯಾಯಾಲಯದ ಮೊರೆ ಹೋಗಿ ಆ ಸಾಲ ವಸೂಲಿ ಮಾಡಿದ್ದಾರೆ.
ಶಿರಸಿ ನಗರಸಭೆ ಮಾಜಿ ಸದಸ್ಯ ಶ್ರೀಧರ ಹಿರಿಯಾ ಮೊಗೇರ ಅವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸ್ವಭಾವಹೊಂದಿದ್ದರು. ಶಿರಸಿಯ ವರದಿಗಾರ ಹುಲಿಗೇಶ ಭೋವಿವಡ್ಡರ್ ಅವರು ಸಹಾಯ ಕೇಳಿ ಆಗಮಿಸಿದಾಗ ಶ್ರೀಧರ ಮೊಗೇರ್ ಅವರಿಗೆ ಇಲ್ಲ ಎನ್ನಲು ಸಾಧ್ಯವಾಗಿಲ್ಲ. ಸಾಲ ಕೇಳಿ ಬಂದ ಹುಲಿಗೇಶ್ ಭೋವಿವಡ್ಡರ್ ಅವರಿಗೆ ಶ್ರೀಧರ ಮೊಗೇರ್ ಅವರು 3 ಲಕ್ಷ ರೂ ನೀಡಿದ್ದರು. ಆದರೆ, ಈ ಹಣವನ್ನು ಮರಳಿಸಲು ಹುಲಿಗೇಶ್ ಅವರು ಮರೆತಿದ್ದರು.
ಸಾಕಷ್ಟು ಬಾರಿ ನೆನಪಿಸಿದ ನಂತರ 2024ರಲ್ಲಿ ಹುಲಿಗೇಶ್ ಅವರು ಸಾಲ ಮರುಪಾವತಿಗಾಗಿ ಚೆಕ್ ನೀಡಿದ್ದರು. ಆದರೆ, ಆ ಚೆಕ್’ನ್ನು ಬ್ಯಾಂಕಿಗೆ ಹಾಕಿದಾಗ ನಗದು ಆಗಿರಲಿಲ್ಲ. ಚೆಕ್ ಅಮಾನ್ಯವಾದ ಹಿನ್ನಲೆ ಶ್ರೀಧರ್ ಮೊಗೇರ್ ಅವರು ಶಿರಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು. ವಕೀಲ ಪ್ರಶಾಂತ ನಾಯ್ಕ ಅವರು ವಾದ ಮಂಡಿಸಿ ಶ್ರೀಧರ ಮೊಗೇರ್ ಅವರಿಗೆ ಆದ ಅನ್ಯಾಯದ ಬಗ್ಗೆ ಮನವರಿಕೆ ಮಾಡಿದರು.
ವಾದ ಹಾಗೂ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಶಾರದಾದೇವಿ ಸಿ ಹಟ್ಟಿ ಅವರು ಸಾಲ ನೀಡಿದ್ದ ಶ್ರೀಧರ ಹಿರಿಯಾ ಮೊಗೇರ ಅವರಿಗೆ ಸಾಲಪಡೆದಿದ್ದ ಹುಲಿಗೇಶ ಭೋವಿವಡ್ಡರ್ ಅವರು 3,05,000ರೂ ಕೊಡಬೇಕು ಎಂದು ಆದೇಶಿಸಿದರು. `ಅದರಲ್ಲಿ 1ಸಾವಿರ ರೂ ದಂಡವನ್ನು ಪಾವತಿಸಬೇಕು. ಇದಕ್ಕೆ ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ತೀರ್ಪು ಹೊರಡಿಸಿದರು.