ನ್ಯಾಯವಾದಿ ನಾಗರಾಜ ನಾಯಕ ಅವರು ಕಳೆದ ಒಂದು ವಾರದಿಂದ ಅಂಕೋಲಾದಲ್ಲಿ ಧರಣಿ ನಡೆಸುತ್ತಿದ್ದು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಪ್ರಮುಖ ಮೂರು ನಾಯಕರು ಈ ಪ್ರತಿಭಟನೆ ಕುರಿತು ಮೌನವಾಗಿದ್ದಾರೆ. ವಿವಿಧ ಹಂತದ ಮುಖಂಡರು ಪ್ರತಿಭಟನೆ ಪರ-ವಿರುದ್ಧ ನಿಲುವುವ್ಯಕ್ತಪಡಿಸಿದರಾದರೂ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರು ಈ ಕುರಿತು ಈವರೆಗೆ ಯಾವುದೇ ಮಾತನಾಡಿಲ್ಲ!
ಸ್ವಚ್ಛತೆ, ಸಂಘಟನೆ, ಕಲಾ ಆರಾಧನೆ, ಕೃಷಿ ಜೊತೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ವಕೀಲರಾಗಿಯೂ ನಾಗರಾಜ ನಾಯಕ ಅವರು ಪ್ರಸಿದ್ಧಿಪಡೆದಿದ್ದಾರೆ. ಬಿಜೆಪಿ ಪಕ್ಷದಲ್ಲಿಯೂ ಅವರು ಸಕ್ರೀಯರಾಗಿದ್ದಾರೆ. ಅನೇಕರ ಜೊತೆ ಅನ್ಯೋನ್ಯವಾಗಿರುವ ಕಾರಣ ನಾಗರಾಜ ನಾಯಕ ಅವರು ನಡೆಸುತ್ತಿರುವ ಧರಣಿಗೆ ಅವರ ಆಪ್ತರೆಲ್ಲರೂ ಆಗಮಿಸಿ ಬೆಂಬಲ ನೀಡಿದ್ದಾರೆ. ನಾಗರಾಜ ನಾಯಕ ಅವರು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ವಿರುದ್ಧ ಈ ಧರಣಿ ಶುರು ಮಾಡಿದ್ದು, ಗೋಪಾಲಕೃಷ್ಣ ನಾಯಕ ಅವರ ಬೆಂಬಲಿಗರು ನಾಗರಾಜ ನಾಯಕ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಕೇಣಿ ವಾಣಿಜ್ಯ ಬಂದರು ಹೋರಾಟ ಸೇರಿ ವಿವಿಧ ವಿಷಯಗಳ ಬಗ್ಗೆ ಗೋಪಾಲಕೃಷ್ಣ ನಾಯಕ ಅವರು ಬಡವರ ಪರವಾಗಿರುವುದನ್ನು ನೆನಪಿಸಿ ಅವರಿಗೂ ಅನೇಕರು ಬೆಂಬಲ ನೀಡಿದ್ದಾರೆ. ಬೇರೆ ಬೇರೆ ತಾಲೂಕುಗಳಲ್ಲಿಯೂ ಪ್ರತಿಭಟನೆಯ ಪರ ಹಾಗೂ ವಿರೋಧ ಪ್ರತಿಕ್ರಿಯೆವ್ಯಕ್ತವಾಗುತ್ತಿದೆ. ಆದರೆ, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ರಾಜಕೀಯದ ಮುಖ್ಯ ಮೂವರು ನೇತಾರರು ಈ ವಿಷಯವಾಗಿ ಪರ-ವಿರೋಧವನ್ನು ಕಾಣಿಸಿಕೊಳ್ಳದೇ ಈವರೆಗೂ ತಟಸ್ಥವಾಗಿಯೇ ಇದ್ದಾರೆ.
ಸದ್ಯದ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ಸಿನಲ್ಲಿದ್ದರೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ವೈರತ್ವ ಕಟ್ಟಿಕೊಂಡಿದ್ದಾರೆ. ಸತೀಶ್ ಸೈಲ್ ಹಾಗೂ ಗೋಪಾಲಕೃಷ್ಣ ನಾಯಕ ಅವರ ನಡುವೆ ಈಗಾಗಲೇ ಸಾಕಷ್ಟು ತೆರೆಮರೆಯ ಹೋರಾಟಗಳು ನಡೆದಿದೆ. ಅದಾಗಿಯೂ, ಗೋಪಾಲಕೃಷ್ಣ ನಾಯಕ ಅವರ ವಿರುದ್ಧ ಬಿಜೆಪಿಯ ನಾಗರಾಜ ನಾಯಕ ಅವರು ನಡೆಸುತ್ತಿರುವ ಹೋರಾಟದಲ್ಲಿ ಅವರು ಒಮ್ಮೆಯೂ ಕಾಣಿಸಿಕೊಂಡಿಲ್ಲ. ಶಾಸಕ ಸತೀಶ್ ಸೈಲ್ ಅವರು ಪ್ರತಿಭಟನಾಕಾರರ ಮನವಿ ಆಲಿಸಿ, ಆ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಸಮಾಧಾನ ಹೇಳುವ ಅವಕಾಶವಿದ್ದರೂ ಅದರಿಂದ ಅವರು ತಪ್ಪಿಸಿಕೊಂಡಿದ್ದಾರೆ. ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸಹ ತಮ್ಮದೇ ಪಕ್ಷದ ಹಿರಿಯ ಮುಖಂಡರು ನಡೆಸುತ್ತಿರುವ ಪ್ರತಿಭಟನೆಗೆ ಬಹಿರಂಗ ಬೆಂಬಲ ಕೊಟ್ಟಿಲ್ಲ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗಲೂ ರೂಪಾಲಿ ನಾಯ್ಕ ಅವರು ಜೊತೆಗೆ ಬಂದಿಲ್ಲ. ಇನ್ನೂ, ಜೆಡಿಎಸ್ ಪಕ್ಷದ ಸೂರಜ ನಾಯ್ಕ ಸೋನಿ ಹಾಗೂ ಇನ್ನಿತರರು ನಾಗರಾಜ ನಾಯಕ ಅವರ ಪ್ರತಿಭಟನೆಗೆ ಬಂದು ಬೆಂಬಲ ನೀಡಿದರೂ, ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಈ ಪ್ರತಿಭಟನೆ ಬಗ್ಗೆ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ. ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿಯೇ ನಡೆದ ಬೆಳವಣಿಗೆಯ ಬಗ್ಗೆ ಈ ಮೂವರು ನಾಯಕರು ಮೌನವಾಗಿರುವುದರಿಂದ ಈ ಪ್ರತಿಭಟನೆ ವಿಷಯವಾಗಿ ಅವರ ನಿಲುವುಗಳ ಬಗ್ಗೆ ಚರ್ಚೆ ಶುರುವಾಗಿದೆ.