ಯಲ್ಲಾಪುರದ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ತಮ್ಮ ಆತ್ಮೀಯರಾದ ಸಂಕಲ್ಪ ಪ್ರಮೋದ ಹೆಗಡೆ ಅವರ ಮೂಲಕ ಧಾರವಾಡದ ಮಹಿಳೆಯೊಬ್ಬರ ಖಾತೆಗೆ 12 ಲಕ್ಷ ರೂ ವರ್ಗಾಯಿಸಿದ್ದಾರೆ. ವಾರದ ಒಳಗೆ ಕೋಟಿ ರೂ ಕೊಡುವುದಾಗಿ ನಂಬಿಸಿದ್ದ ಆ ಮಹಿಳೆ ಮತ್ತೆ ಮೂವರ ಜೊತೆ ಸೇರಿ ಮೋಸ ಮಾಡಿದ್ದಾರೆ!
ಯಲ್ಲಾಪುರದ ಜಂಬೆಸಾಲಿನಲ್ಲಿ ಪ್ರಮೋದ ಶಿವರಾಮ ಹೆಗಡೆ ಅವರು ವಾಸವಾಗಿದ್ದಾರೆ. ಕೃಷಿ ಜೊತೆ ವಿವಿಧ ವ್ಯವಹಾರಗಳನ್ನು ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಧಾರವಾಡ ನಾರಾಯಣಪುರ ಬಳಿಯ ಹೇಮಾವತಿ ಜಯಪ್ರಕಾಶ ಅವರು ಪ್ರಮೋದ ಶಿವರಾಮ ಹೆಗಡೆ ಅವರಿಗೆ ಮೊದಲಿನಿಂದಲೂ ಪರಿಚಿತರಾಗಿದ್ದಾರೆ. ಹೇಮಾವತಿ ಜಯಪ್ರಕಾಶ ಅವರು ಸರ್ಕಾರಿ ಉದ್ಯೋಗಿಯಾಗಿದ್ದು, ಈಚೆಗೆ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಜಂಬೆಸಾಲಿನ ಪ್ರಮೋದ ಹೆಗಡೆ ಹಾಗೂ ಹೇಮಾವತಿ ಜಯಪ್ರಕಾಶ ಅವರ ನಡುವೆ ಉತ್ತಮ ಬಾಂಧವ್ಯವಿದ್ದು, ಅದೇ ವಿಶ್ವಾಸದ ಆಧಾರದಲ್ಲಿ ಹೇಮಾವತಿ ಜಯಪ್ರಕಾಶ ಅವರು ದುಡ್ಡು ಡಬಲ್ ಮಾಡುವ ಯೋಜನೆಯೊಂದರ ಬಗ್ಗೆ ಪ್ರಸ್ತಾಪಿಸಿದ್ದಾರೆ.
2025ರ ಅಕ್ಟೊಬರ್ 10ರಂದು ಜಂಬೆಸಾಲಿನ ಪ್ರಮೋದ ಹೆಗಡೆ ಅವರಿಗೆ ಫೋನ್ ಮಾಡಿದ ಹೇಮಾವತಿ ಅವರು `ತಾನೊಂದು ದೊಡ್ಡ ಲಾಭದಾಯಕ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ 15 ಲಕ್ಷ ರೂ ಕೊಟ್ಟರೆ ಒಂದು ವಾರದ ಒಳಗೆ 1 ಕೋಟಿ ರೂ ಮರಳಿ ಕೊಡುವೆ’ ಎಂದು ಹೇಳಿದ್ದಾರೆ. `ತಾನೂ ಸೂಚಿಸಿದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಬೇಕು. ಆ ಕಂಪನಿಯವರೇ ಲಾಭದ ಹಣ ನೀಡುತ್ತಾರೆ’ ಎಂದು ನಂಬಿಸಿದ್ದಾರೆ. ಆಗ, ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಈ ಬಗ್ಗೆ ಅನುಮಾನವ್ಯಕ್ತಪಡಿಸಿದ್ದಾರೆ. `ಈ ಯೋಜನೆಗೆ ನಾನೇ ಗ್ಯಾರಂಟಿ. ಹಣ ಬಂದಿಲ್ಲ ಎಂದಾದರೆ ನನ್ನ ಆಸ್ತಿ ಮಾರಾಟ ಮಾಡಿಯಾದರೂ ಕೋಟಿ ರೂ ಕೊಡುವೆ’ ಎಂದು ಹೇಮಲತಾ ಅವರು ಧೈರ್ಯ ಹೇಳಿದ್ದಾರೆ.
ಅದಾದ ನಂತರ 15 ಲಕ್ಷ ರೂ ಬದಲಾಗಿ 12 ಲಕ್ಷ ರೂ ತುರ್ತಾಗಿ ತಾನು ಹೇಳಿದ ಖಾತೆಗೆ ಜಮಾ ಮಾಡುವಂತೆ ಹೇಮಲತಾ ಅವರು ಜಂಬೆಸಾಲಿನ ಪ್ರಮೋದ ಹೆಗಡೆ ಅವರಿಗೆ ಸೂಚಿಸಿದ್ದಾರೆ. ಜಂಬೆಸಾಲಿನ ಪ್ರಮೋದ ಹೆಗಡೆ ಅವರ ಖಾತೆಯಲ್ಲಿ ಹಣವಿಲ್ಲದ ಕಾರಣ ಅವರು ಯುಕೆ ಸೌಹಾರ್ಧ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಂಕಲ್ಪ ಪ್ರಮೋದ ಹೆಗಡೆ ಅವರ ಮೊರೆ ಹೋಗಿದ್ದಾರೆ. ಸಂಕಲ್ಪ ಪ್ರಮೋದ ಹೆಗಡೆ ಅವರು ಸೊಸೈಟಿಯ ಸ್ಟೇಟ್ ಬ್ಯಾಂಕ್ ಇಂಡಿಯಾ ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸುವ ಕೆಲಸ ಮಾಡಿದ್ದಾರೆ.
ಜಂಬೆಸಾಲ ಪ್ರಮೋದ ಹೆಗಡೆ ಅವರ ಸೂಚನೆ ಪ್ರಕಾರ ಸಂಕಲ್ಪ ಪ್ರಮೋದ ಹೆಗಡೆ ಅವರು ವರ್ಗಾಯಿಸಿದ 12 ಲಕ್ಷ ರೂ ಹಣ ಹೈದರಾಬಾದಿನ ಅನುಶ್ರೀ ಎಂಟರಪ್ರೆಸಸ್ ಎಂಬ ಕಂಪನಿಗೆ ಜಮಾ ಆಗಿದೆ. ಅದಾದ ವಾರದ ನಂತರ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಹೇಮಲತಾ ಅವರಿಗೆ ಫೋನ್ ಮಾಡಿದ್ದಾರೆ. `ವಾರ ಕಳೆದರೂ ಕೋಟಿ ರೂ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ. `ಹಣಕಾಸು ಬಟವಡೆ ಕೊಂಚ ತಡವಾಗಿದೆ. ತಿಂಗಳ ಒಳಗೆ ಹಣ ಬರಲಿದೆ’ ಎಂದು ಹೇಮಲತಾ ಅವರು ಭರವಸೆ ನೀಡಿದ್ದಾರೆ. ಒಂದು ತಿಂಗಳ ನಂತರ ಮತ್ತೆ ಫೋನ್ ಮಾಡಿದಾಗ `ಕಂಪನಿಯವರು ಇಲ್ಲಿಯೇ ಇದ್ದಾರೆ’ ಎಂದು ನಂಬಿಸಿದ್ದಾರೆ. ಕಂಪನಿಯ ಸೀಮ್‌ಸನ್, ಶಿರಸಿಯ ಹರ್ಷ ಹಾಗೂ ಬೆಂಗಳೂರಿನ ರಕ್ಷಿತಾ ಎಂಬಾತರನ್ನು ಹೇಮಲತಾ ಅವರು ಪರಿಚಯ ಮಾಡಿಸಿದ್ದಾರೆ.
ಆ ಮೂವರ ಜೊತೆ ಮಾತನಾಡಿದಾಗ `ಹಣ ಮರು ಪಾವತಿಗೆ ಮತ್ತೆ 15 ದಿನ ಸಮಯಾವಕಾಶ ಬೇಕು’ ಎಂದಿದ್ದಾರೆ. ಅದಾದ ನಂತರ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಮತ್ತೆ ವಿಚಾರಿಸಿದಾಗ `ನನಗೂ ಕಂಪನಿಯಿoದ ಮೋಸವಾಗಿದೆ. ಇದಕ್ಕೂ ನನಗೂ ಸಂಬoಧವೇ ಇಲ್ಲ’ ಎಂದು ಹೇಮಲತಾ ಜಯಪ್ರಕಾಶ ಅವರು ಹೇಳಿದ್ದಾರೆ. `ನಿಮ್ಮ ಲಾಭಕ್ಕಾಗಿ ನೀವು ಅಲ್ಲಿ ಹಣ ಕೊಟ್ಟಿದ್ದು. ಈ ಹಣದ ಬಗ್ಗೆ ನನ್ನಲ್ಲಿ ಕೇಳಬೇಡಿ’ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ವರ್ಷ ಸಮೀಪಿಸಿದರೂ ಹಣ ಬಾರದ ಹಿನ್ನಲೆ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಈ ಎಲ್ಲಾ ವಿಷಯಗಳ ಬಗ್ಗೆ ಪೊಲೀಸರ ಮುಂದೆ ವಿವರಿಸಿದ್ದಾರೆ. ನಿವೃತ್ತ ಉದ್ಯೋಗಿ ಹೇಮಲತಾ ಜಯಪ್ರಕಾಶ ಅವರ ಜೊತೆ ಅನುಶ್ರೀ ಎಂಟರಪ್ರೆಸೆಸ್ ಉದ್ಯೋಗಿಗಳಾದ ಹರ್ಷ ಶಿರಸಿ, ರಕ್ಷಿತಾ ಬೆಂಗಳೂರು ಹಾಗೂ ಸೀಮ್‌ಸೆನ್ ಹೈದರಾಬಾದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ಹಣಕಾಸು ವ್ಯವಹಾರ ಮಾಡುವಾಗ ಹುಷಾರು’