ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24ಗಂಟೆ ಅವಧಿಯಲ್ಲಿ ನಾಲ್ಕು ಪ್ರಮುಖ ಅಪರಾಧ ಪ್ರಕರಣಗಳು ವರದಿಯಾಗಿದೆ.
ಅಪಘಾತ: ಇಬ್ಬರ ಸಾವು: ಜೊಯಿಡಾದ ರಾಮನಗರ ಬಳಿಯ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ ಗ್ರಾಮದ ಹತ್ತಿರ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೊಂಡ್ಲಾ ಮುರಳಿ ಹಾಗೂ ಬೋಯಾ ಮಹೇಶ ಸಾವನಪ್ಪಿದವರಾಗಿದ್ದಾರೆ.
ಖಾನಾಪುರದಿಂದ ಗೋವಾಕ್ಕೆ ಕೋಳಿ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಮಹಿಂದ್ರಾ ಬುಲೇರೋ ಪಿಕ್-ಅಪ್ ವಾಹನಕ್ಕೆ, ಎದುರುಗಡೆಯಿಂದ ಬಂದ ಆಂಧ್ರಪ್ರದೇಶ ಮೂಲದ ಕಾರು ಚಾಲಕ ಶೇಖ ಷಾವಲಿ ಎಂಬಾತ ಅತಿವೇಗ ಮತ್ತು ಅಜಾಗರೂಕತೆಯಿಂದ ಓವರ್-ಟೇಕ್ ಮಾಡಲು ಹೋಗಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಪಿಕ್-ಅಪ್ ವಾಹನ ರಸ್ತೆಯಲ್ಲೇ ಉರುಳಿ ಬಿದ್ದಿದ್ದು, ಕಾರು ರಸ್ತೆ ಪಕ್ಕದ ತಗ್ಗಿಗೆ ಬಿದ್ದಿದೆ. ಪಿಕ್-ಅಪ್ ಚಾಲಕ ಕಲ್ಲಪ್ಪ ಮಾದರ ಹಾಗೂ ಕಾರು ಚಾಲಕ ಶೇಖ ಷಾವಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾವಿ ನೀರಿನ ಜಗಳ: ಅಣ್ಣ-ತಮ್ಮನ ನಡುವೆ ಮಾರಾಮಾರಿ : ಸಿದ್ದಾಪುರ ತಾಲ್ಲೂಕಿನ ಶೇಲೂರು ಗ್ರಾಮದಲ್ಲಿ ದಿನನಿತ್ಯ ಬಳಸುವ ಬಾವಿ ನೀರಿಗೆ ಸಂಬಂಧಿಸಿದಂತೆ ಅಣ್ಣ ತಮ್ಮನ ನಡುವೆ ಬಡಿಗೆಯಿಂದ ಹೊಡೆದಾಟ ನಡೆದಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು-ಪ್ರತಿ ದೂರುಗಳು ದಾಖಲಾಗಿವೆ.
ಅಣ್ಣನ ದೂರು: ಬಾವಿಯಿಂದ ನೀರು ಬಳಸದಂತೆ ತಮ್ಮ ಪರಮೇಶ್ವರ ಹಾಗೂ ಆತನ ಹೆಂಡತಿ ರಾಧಾ ತೊಂದರೆ ಕೊಡುತ್ತಿದ್ದರು. ಮೇ 27 ರಂದು ಬಾವಿಗೆ ಬಿದ್ದ ಕೊಡ ತೆಗೆಯುವ ನೆಪದಲ್ಲಿ ಬಂದು ಗಲಾಟೆ ಮಾಡಿ, ನನ್ನ ಹಾಗೂ ನನ್ನ ಹೆಂಡತಿ ಇಂದಿರಾ ಅವರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಅಣ್ಣ ದತ್ತಾತ್ರೆಯ ನಾಯ್ಕ ದೂರು ನೀಡಿದ್ದಾರೆ.
ತಮ್ಮನ ದೂರು: ಬಾವಿಗೆ ಬಿದ್ದ ಕೊಡವನ್ನು ತೆಗೆಸಲು ಜನರನ್ನು ಕರೆಯಿಸಿದಾಗ ಅಣ್ಣ ದತ್ತಾತ್ರೆಯ, ಆತನ ಹೆಂಡತಿ ಮತ್ತು ಮಗಳು ಬಂದು ಅವಾಚ್ಯವಾಗಿ ಬೈದು, ಬಡಿಗೆಯಿಂದ ತಲೆ ಹಾಗೂ ಕೈಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ತಮ್ಮ ಪರಮೇಶ್ವರ ನಾಯ್ಕ ಪ್ರತಿ-ದೂರು ದಾಖಲಿಸಿದ್ದಾರೆ.
ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ನೇಣಿಗೆ ಶರಣು: ಯಲ್ಲಾಪುರದ ಸುಣಜೋಗ ಗ್ರಾಮದ ಇಡಗುಂದಿ ನಿವಾಸಿ ದಯಾನಂದ ನಾಗಪ್ಪ ಸಿದ್ದಿ (20) ಎಂಬ ಯುವಕ ತನ್ನದೇ ಮನೆಯ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡುತ್ತಿದ್ದ ನಾಗಪ್ಪ ಸಿದ್ದಿ ಅವರು 3 ತಿಂಗಳ ಹಿಂದೆ ಊರಿಗೆ ಬಂದಿದರು. ಈ ವೇಳೆ ಕೆಲವು ಕೆಟ್ಟ ಚಟಗಳಿಗೆ ದಾಸನಾಗಿ ಮಾನಸಿಕವಾಗಿ ನೊಂದಿದ್ದರು.ಇದೇ ಬೇಸರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗೊತ್ತಾಗಿದೆ.
ಮಗನ ಸಾವಿನ ಬಗ್ಗೆ ನಾಗಪ್ಪ ಸಿದ್ದಿ ಅವರು ಮಾಹಿತಿ ನೀಡಿದ್ದು, ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.