ಪ್ರವಾಸಕ್ಕೆ ಬಂದಾಗ ಪಾಲಕರಿಂದ ತಪ್ಪಿಸಿಕೊಂಡಿದ್ದ ಮಗು ಕಡಲತೀರದಲ್ಲಿ ಒಂಟಿಯಾಗಿ ಅಲೆದಾಡುತ್ತಿದ್ದು, ಇದನ್ನು ಗಮನಿಸಿದ ಗೋಕರ್ಣ ಗೃಹ ರಕ್ಷಕ ಸಿಬ್ಬಂದಿ ಅಪಾಯ ಎದುರಾಗುವ ಮುನ್ನ ರಕ್ಷಿಸಿದ್ದಾರೆ. ಜೊತೆಗಿದ್ದ ಪ್ರವಾಸಿ ಮಿತ್ರ ಸಿಬ್ಬಂದಿ ಸಹ ಪಾಲಕರನ್ನು ಹುಡುಕಿ ಮಗುವನ್ನು ಅವರಿಗೆ ಹಸ್ತಾಂತರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಶ್ವಿನಿ ಹಾಗೂ ರಾಜು ಅವರು ತಮ್ಮ ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದರು. ಅವರು ಸಮುದ್ರ ವೀಕ್ಷಣೆಗೆ ಹೋದಾಗ ಅಕ್ಷತಾ ಎಂಬ ಒಂದು ವರ್ಷದ ಮಗು ಅವರಿಂದ ತಪ್ಪಿಸಿಕೊಂಡಿತು. ಸಾಕಷ್ಟು ಹುಡುಕಾಟ ನಡೆಸಿದರೂ ಮಗು ಸಿಕ್ಕಿರಲಿಲ್ಲ. ಈ ವೇಳೆ ಅದೇ ಮಗು ಸಮುದ್ರ ತೀರದ ಬಳಿ ಅಳುತ್ತಿರುವುದನ್ನು ಗೃಹರಕ್ಷಕ ಸಿಬ್ಬಂದಿ ರಘು ನಾಯ್ಕ ಅವರು ಗಮನಿಸಿದರು. ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ತಕ್ಷಣ ಮಗುವನ್ನು ಎತ್ತಿಕೊಂಡು ಮಗು ಸಮುದ್ರದ ಕಡೆ ಹೋಗದ ಹಾಗೇ ತಡೆದರು.
ಸುಮಾರು ಅರ್ದ ಗಂಟೆಗಳ ಕಾಲ ಮಗು ಅಳುತ್ತಿದ್ದು, ಸಮಾಧಾನ ಮಾಡಲು ಸಾಧ್ಯವಾಗಲಿಲ್ಲ. ಅದಾಗಿ ಕೆಲ ಸಮಯದ ನಂತರ ಮಗು ಕಾಣೆಯಾದ ಬಗ್ಗೆ ಪಾಲಕರು ಹುಡುಕುತ್ತಿರುವುದು ಗೃಹರಕ್ಷಕ ಸಿಬ್ಬಂದಿ ರಘು ನಾಯ್ಕ ಹಾಗೂ ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಅವರ ಗಮನಕ್ಕೆ ಬಂದಿತು. ಆ ಪಾಲಕರನ್ನು ಹುಡುಕಿದ ಅವರಿಬ್ಬರು ಮಗುವನ್ನು ಹಸ್ತಾಂತರಿಸಿದರು. ಕುಟುಂಬದವರನ್ನು ನೋಡಿದ ತಕ್ಷಣ ಮಗು ಅಳು ನಿಲ್ಲಿಸಿದ್ದು, ಪಾಲಕರ ಆತಂಕವೂ ದೂರವಾಯಿತು.