ಕುಮಟಾ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬoಧಿಸಿ ಕೆಡಿಸಿಸಿ ಬ್ಯಾಂಕ್ ಶಿರಸಿ ಶಾಖೆಯ ಮಾಜಿ ಸಹಾಯಕ ಮಹಾಪ್ರಬಂಧಕ ರಾಮ ಗಣಪತಿ ಭಾಗವತ್ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. `ಪ್ರತಿ 15 ದಿನಗಳಿಗೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗುವುದರ ಜೊತೆ ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು’ ಎಂಬ ಷರತ್ತಿನ ಜೊತೆ ಜಾಮೀನು ಮಂಜೂರಿ ಮಾಡಿದೆ.
ಕುಮಟಾ ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ 2017ರಿಂದ 2020ರ ಅವಧಿಯಲ್ಲಿ ಸುಮಾರು 7.23 ಕೋಟಿ ರೂ ಹಣ ದುರುಪಯೋಗ ನಡೆದಿತ್ತು.2 023ರಲ್ಲಿ ಪೊಲೀಸ್ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ತನಿಖೆ ವೇಳೆ ಕೆಡಿಸಿಸಿ ಬ್ಯಾಂಕ್ ಶಿರಸಿ ಶಾಖೆಯಲ್ಲಿ ಎಜಿಎಂ ಆಗಿದ್ದ ರಾಮ ಗಣಪತಿ ಭಾಗವತ್ ಅವರು ಹಣ ದುರುಪಯೋಗ ಮಾಡಲು ಸಹಕಾರ ನೀಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಆದರೆ, ರಾಮ ಭಾಗವತ ಪರ ವಕೀಲರು ಇದನ್ನು ಅಲ್ಲಗಳೆದಿದ್ದರು. ಮೂಲ ದೂರಿನಲ್ಲಿ ಅವರ ಹೆಸರಿನಲ್ಲ ಎಂದು ವಆದಿಸಿದ್ದರು. ಆದರೆ, ಸರ್ಕಾರಿ ವಕೀಲರು ಆರೋಪಿತರಿಗೆ `ರಾಮ ಭಾಗವತ್ ಅವರು ಸಹಕಾರ ನೀಡಿದ ಗಂಭೀರ ಆರೋಪವಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು’ ಎಂದು ವಾದಿಸಿದ್ದರು. `ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಅಥವಾ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ಹೇಳಿದರು.
ನ್ಯಾಯಾಲಯವು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ, ಅರ್ಜಿದಾರರ ವಿರುದ್ಧ ನೇರ ಆರೋಪಗಳು ಎಫ್‌ಐಆರ್‌ನಲ್ಲಿ ಇಲ್ಲ ಎಂಬುದನ್ನು ಗಮನಿಸಿತು. ಹೀಗಾಗಿ ಷರತ್ತುಬದ್ಧ ಜಾಮೀನು ಮಂಜೂರಿ ಮಾಡಿತು. ನ್ಯಾಯಾಲಯ ರಾಮ ಗಣಪತಿ ಭಾಗವತ್ ಅವರಿಗೆ 1 ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್ ಹಾಗೂ ಸಮಾನ ಮೊತ್ತದ ಒಬ್ಬ ಜಾಮೀನುದಾರರ ಭದ್ರತೆಯ ಮೇಲೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇನ್ನೂ ಸಂಘದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷöಣ ಪಟಗಾರ ಅವರ ವಿರುದ್ಧ ದಾಖಲಾದ ದೂರು ವಿಶೇಷ ನ್ಯಾಯಾಲಯದಲ್ಲಿದ್ದು, ವಿಚಾರಣೆ ಮುಂದುವರೆದಿದೆ.