ಮುಂಡಗೋಡು ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೇಂದ್ರಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆ ಅವರು ತಡೆ ಒಡ್ಡಿದ್ದಾರೆ.
ಮುಂಡಗೋಡು ಕಂಬಾರಕಟ್ಟಿ ಪ್ಲಾಟಿನ ದುರ್ಗಪ್ಪ ಭೀಮಣ್ಣ ವಡ್ಡರ್ ಹಾಗೂ ನೆಹರುನಗರದ ಹೊಟೇಲ್ ವ್ಯಾಪಾರಿ ರಾಜೀವ ಬುಜ್ಜಿವನ ಶೆಟ್ಟಿ ಅವರು ಸರ್ಕಾರಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದರು. ನಸುಕಿನಲ್ಲಿಯೇ ಅಂಗಡಿ ಬಾಗಿಲು ತೆರೆದು ಅವರು ದುಬಾರಿ ಬೆಲೆಗೆ ಮದ್ಯ ಮಾರುತ್ತಿದ್ದರು. ವೈನ್‌ಶಾಪ್ ತೆಗೆಯುವ ಮುನ್ನವೇ ಇಲ್ಲಿ ಸರಾಯಿ ಸಿಗುವುದರಿಂದ ಅವರಿಗೆ ಅನೇಕ ಗ್ರಾಹಕರು ಇದ್ದರು.
ಯಾವುದೇ ರೀತಿಯ ಪರವಾನಿಗೆಪಡೆಯದೇ ಮದ್ಯ ಮಾರಾಟ ಮಾಡುತ್ತಿದ್ದ ಅವರಿಬ್ಬರ ಮೇಲೆ ಪೊಲೀಸರು ದಾಳಿ ಮಾಡಿದರು. ಕಂಬಾರಕಟ್ಟೆ ಬಸ್ ನಿಲ್ದಾಣದ ಎದುರು ಸರಾಯಿ ಮಾರಾಟ ಮಾಡುತ್ತಿದ್ದ ದುರ್ಗಪ್ಪ ಭೀಮಣ್ಣ ವಡ್ಡರ್ ಅವರು ಸಿಕ್ಕಿಬಿದ್ದರು. ಶೆಟ್ಟಿ ಫಿಶ್‌ಲ್ಯಾಂಡ್ ಹಿಂದೆ ಅಕ್ರಮ ಮದ್ಯ ಪೂರೈಸುತ್ತಿದ್ದ ರಾಜೀವ ಬುಜ್ಜಿವನ ಶೆಟ್ಟಿ ಅವರು ಪೊಲೀಸರ ಅತಿಥಿಯಾದರು. ಅಲ್ಲಿ ಮಾರಾಟಕ್ಕಿರಿಸಿದ್ದ ಅಕ್ರಮ ಮದ್ಯದ ಬಾಟಲಿಗಳನ್ನು ವಶಕ್ಕೆಪಡೆದು, ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿದರು.