‘ವೃತ್ತಿಪರ ಯಶಸ್ಸಿಗೆ ಸಮಗ್ರತೆ ಹಾಗೂ ಸಮಯಪಾಲನೆ ಅಗತ್ಯ’ ಎಂದು ಕಾರವಾರ ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ ಗಣೇಶ ಬಿಷ್ಟಣ್ಣನವರ ಅವರು ಹೇಳಿದ್ದಾರೆ.
ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ನಡೆದ “ವೃತ್ತಿಪರ ಯಶಸ್ಸಿನ ಗುಟ್ಟು – ನೈತಿಕತೆ ಮತ್ತು ಕಾರ್ಯಸ್ಥಳದ ಶಿಷ್ಟಾಚಾರ” ವಿಷಯದ ಕುರಿತು ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ‘ಔದ್ಯೋಗಿಕ ಕ್ಷೇತ್ರದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಸಮಯಪಾಲನೆ ಅತ್ಯಗತ್ಯ ಗುಣಗಳಾಗಿವೆ. ಜ್ಞಾನ ಮತ್ತು ತಾಂತ್ರಿಕ ಕೌಶಲ್ಯ ಎಷ್ಟು ಮುಖ್ಯವೋ ಅದೇ ರೀತಿ ವ್ಯಕ್ತಿಯ ನಡವಳಿಕೆ ಮತ್ತು ವೃತ್ತಿಪರ ನೈತಿಕತೆಯೂ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸುತ್ತದೆ’ ಎಂದು ಹೇಳಿದರು.
ಐಟಿಐ ತರಬೇತಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕತೆ, ಜವಾಬ್ದಾರಿ ಮತ್ತು ಕಾರ್ಯಸ್ಥಳದ ಶಿಷ್ಟಾಚಾರಗಳ ಕುರಿತು ಅವರು ವಿವಿಧ ಉದಾಹರಣೆಗಳ ಮೂಲಕ ಮನಮುಟ್ಟುವಂತೆ ವಿವರಿಸಿದರು. ‘,ಸೌಜನ್ಯ, ಸುರಕ್ಷತೆ ಹಾಗೂ ಸ್ವಚ್ಛತೆಯನ್ನು ಜೀವನದ ಅವಿಭಾಜ್ಯ ಅಂಗಗಳಾಗಿ ಮಾಡಿಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ದಿನೇಶ್ ಆರ್ ನಾಯ್ಕ್ ಅವರು ಮಾತನಾಡಿ ‘ಬದಲಾವಣೆ ಇಲ್ಲದಿದ್ದರೆ ಬೆಳವಣಿಗೆ ಸಾಧ್ಯವಿಲ್ಲ. ಕಾಲಾನುಗುಣವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಂಡು ತಮ್ಮ ಕಾರ್ಯ ಸ್ಥಳದಲ್ಲಿ ಯಶಸ್ಸನ್ನು ಸಾಧಿಸಿರಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮವನ್ನು ಸಂಸ್ಥೆಯ ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ದಿನೇಶ್ ಡಿ ನಾಯ್ಕ ಅವರು ಆಯೋಜಿಸಿ ನಿರ್ವಹಿಸಿದರು.