ಶಿರಸಿಗೆ ಬಂದಿದ್ದ ಹೊನ್ನಾವರದ ಇಡಗುಂಜಿ ಬಳಿಯ ಮಾದೇವಿ ನಾಯ್ಕ ಅವರು 3.52 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಜನ ಜಂಗುಳಿಯ ನಡುವೆ ಅವರು ಚಂದ್ರಗುತ್ತಿ-ಹರೀಶಿ ಬಸ್ ಹತ್ತಲು ಪ್ರಯತ್ನಿಸಿದ ವೇಳೆ ಬ್ಯಾಗಿನಲ್ಲಿದ್ದ ಚಿನ್ನದ ಆಭರಣವನ್ನು ಕಳ್ಳರು ಲಪಟಾಯಿಸಿದ್ದಾರೆ.
ಹೊನ್ನಾವರ ಇಡಗುಂಜಿ ಬಳಕೂರಿನ ಹಾಮಾಕ್ಕಿ ನಿವಾಸಿ ಮಾದೇವಿ ರಾಮಚಂದ್ರ ನಾಯ್ಕ ಅವರು ಮೇ 19ರಂದು ಶಿರಸಿಗೆ ಬಂದಿದ್ದರು. ಆ ದಿನ ಮಧ್ಯಾಹ್ನ 2.15ಕ್ಕೆ ಚಂದ್ರಗುತ್ತಿ-ಹರೀಶಿ ಮಾರ್ಗದ ಬಸ್ ಬಂದಿದ್ದು, ಆ ಬಸ್ಸಿನ ತುಂಬ ಜನರಿದ್ದರು. ಜೊತೆಗೆ, ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಜನರು ಆ ಬಸ್ಸು ಹತ್ತಲು ಒಮ್ಮೆಲೆ ಬಂದಿದ್ದರಿAದ ಅಲ್ಲಿ ನೂಕು ನುಗ್ಗಲು ಉಂಟಾಯಿತು. ಮಾದೇವಿ ನಾಯ್ಕ ಅವರ ಜೊತೆ ಅವರ ಪುತ್ರ ದಿಗಂತ, ಅತ್ತೆ ಪಾರ್ವತಿ ಹಾಗೂ ಇನ್ನಿತರ ಸಂಬAಧಿಕರು ಬಸ್ಸಿನ ಬಳಿ ಓಡಿ ಸೀಟು ಹಿಡಿಯುವ ಪ್ರಯತ್ನ ಮಾಡಿದರು.
ಈ ವೇಳೆ ಮಾದೇವಿ ನಾಯ್ಕ ಅವರು ತಮ್ಮ ಬಳಿಯಿದ್ದ ಬಂಗಾರದ ಆಭರಣಗಳನ್ನು ಬಾಕ್ಸಿನಲ್ಲಿ ಹಾಕಿದ್ದು, ಆ ಬಾಕ್ಸನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿರಿಸಿಕೊಂಡರು. ಜನ ಹೆಚ್ಚಾಗಿ ನೂಕುನುಗ್ಗಲಾದ ಅವಧಿಯಲ್ಲಿ ಕಳ್ಳರು ಬ್ಯಾಗಿನ ಜಿಪ್ ತೆರೆದು ಚಿನ್ನಾಭರಣವಿದ್ದ ಬಾಕ್ಸನ್ನು ಎಗರಿಸಿದರು. ಬಂಗಾರದ ನೆಕ್ಲೇಸ್, ಬಂಗಾರದ ಹಾರ, ಚಿನ್ನದ ಉಂಗುರ ಹಾಗೂ ಬೆಳ್ಳಿ ನಾಣ್ಯ ಸೇರಿ 3.52 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಕಳ್ಳರ ಪಾಲಾದವು. ಬಸ್ ಹತ್ತಿದ ನಂತರ ಬ್ಯಾಗಿನ ಜಿಪ್ ತೆರೆದಿರುವುದನ್ನು ನೋಡಿ ಮಾದೇವಿ ನಾಯ್ಕ ಅವರು ಕಂಗಾಲಾದರು. ಆಭರಣ ಕಳ್ಳತನವಾದ ಬಗ್ಗೆ ಅವರು ಪೊಲೀಸ್ ದೂರು ನೀಡಿದರು.