ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಹಿನ್ನಲೆ ಭಟ್ಕಳದಲ್ಲಿ ಶಿರಸಿ ಮಾರಿಕಾಂಬೆ ದೇವಿಯ ಹೊರೆಯನ್ನಿಡುವ ಮುರುವಿನಕಟ್ಟೆಯನ್ನು ಸರ್ಕಾರಿ ಜಮೀನಿಗೆ ಸ್ಥಳಾಂತರಿಸಲಾಗಿದ್ದು, ಅದನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ.
ಸದ್ಯ ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡುವ ಮೂಲ ಕಟ್ಟೆಯಿರುವ ಮುರುವಿನಕಟ್ಟೆ ಸ್ಥಳವು ಯಥಾಸ್ಥಿತಿಯಲ್ಲಿದೆ. ಈ ವಿಷಯವಾಗಿ ಯಾರೂ ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದವರು ಮನವಿ ಮಾಡಿದ್ದಾರೆ. `ಭಟ್ಕಳ ನಗರದ ಮೂಲಕ ಹಾದುಹೋಗುವ ರಾ.ಹೆ-66ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ಅಮ್ಮನವರ ಹೊರೆಯನ್ನಿಡುವ ಮುರುವಿನಕಟ್ಟೆಯನ್ನು ಲಭ್ಯ ಸರ್ಕಾರಿ ಜಮೀನಿನಲ್ಲಿ ಮೇ 24ರಂದು ಕೆಂಪು ಕಲ್ಲಿನಿಂದ ಕಟ್ಟಲಾಗಿತ್ತು. ಅದನ್ನು ಕಿಡಿಗೇಡಿಗಳು ನಾಶಪಡಿಸಿದ್ದು, ಅವರ ವಿರುದ್ಧ ಕಾನೂನು ಕ್ರಮವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಈಗಾಗಲೇ ಮಾಹಿತಿ ನೀಡಿದರೂ ಲವು ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚುತ್ತಿದ್ದಾರೆ’ ಎಂದು ಜಿಲ್ಲಾಧೀಕಾರಿಗಳು ಬೇಸರವ್ಯಕ್ತಪಡಿಸಿದ್ದಾರೆ.
`ಮುರುವಿನಕಟ್ಟೆಗೆ ಧಕ್ಕೆಯಾಗಿರುವ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದನ್ನು ನೋಡಿಯೂ ಜಿಲ್ಲಾಡಳಿತ ಸುಮ್ಮನಿರುವುದಿಲ್ಲ. ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆಯನ್ನಿಡುವ ಮೂಲ ಸ್ಥಳ ಮುರುವಿನಕಟ್ಟೆಯು ಯಥಾಸ್ಥಿತಿಯಲ್ಲಿರುತ್ತದೆ ಎಂಬುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದು, ಈ ವಿಷಯವಾಗಿ ಮತ್ತೆ ಸುಳ್ಳು ಸುದ್ದಿ ಹಬ್ಬಿಸಿದರೆ ಅಂಥವರ ವಿರುದ್ಧವೂ ಕಠಿಣ ಕ್ರಮ ಅನಿವಾರ್ಯ’ ಎಂದು ಡೀಸಿ ಕೆ ಲಕ್ಷ್ಮೀಪ್ರಿಯಾ ಅವರು ಎಚ್ಚರಿಸಿದ್ದಾರೆ.