ಹೊನ್ನಾವರದಲ್ಲಿ `ಕಾರ್ ಶೆಡ್’ ಎಂಬ ಮಳಿಗೆ ಹೊಂದಿದ ಲೋಕೇಶ ಮೇಸ್ತ ಹಾಗೂ ಅಕ್ಷತಾ ಮೇಸ್ತ ದಂಪತಿಗೆ ಹೆಣ್ಣು ಮಗು ಹುಟ್ಟಿ ವರ್ಷ ಕಳೆದಿದೆ. ಆದರೂ, ಲೋಕೇಶ ಮೇಸ್ತ ಅವರು ತವರುಮನೆಯಲ್ಲಿರುವ ಪತ್ನಿ-ಮಗುವನ್ನು ತಮ್ಮ ಮನೆಗೆ ಕರೆದೊಯ್ದಿಲ್ಲ. ಆ ಮಗುವಿನ ಊಟ-ಬಟ್ಟೆಗೆ ಕಾಸು ಸಹ ಕೊಡುತ್ತಿಲ್ಲ!
ಹೊನ್ನಾವರದ ಮಲಬಾರಕೇರಿಯಲ್ಲಿ ಲೋಕೇಶ ನಾಗೇಶ ಮೇಸ್ತ (38) ಅವರು ವಾಸವಾಗಿದ್ದಾರೆ. ಅನೇಕ ವರ್ಷಗಳಿಂದ ಅವರು ವ್ಯಾಪಾರ-ವಹೀವಾಟು ಮಾಡುತ್ತಿದ್ದು, ಹೊನ್ನಾವರದಲ್ಲಿ `ಕಾರ್ ಶೇಡ್’ ಎಂಬ ಮಳಿಗೆ ತೆರೆದಿದ್ದಾರೆ. ವಿವಿಧ ಕಾರುಗಳ ಬಿಡಿಭಾಗ ಹಾಗೂ ಕುಶನ್ ಮಾರಾಟದಿಂದ ಅವರು ಉತ್ತಮ ಬದುಕು ನಿರ್ಮಿಸಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ಲೋಕೇಶ ಮೇಸ್ತ ಅವರಿಗೆ ಮದುವೆಯಾಗಿದೆ. ಹೆಣ್ಣಿನ ಮನೆಯವರೇ ಮದುವೆ ಖರ್ಚು ನೋಡಿಕೊಂಡು, 15 ತೊಲೆ ಬಂಗಾರವನ್ನು ಹಾಕಿ ಅದ್ಧೂರಿ ಮದುವೆ ಮಾಡಿಕೊಟ್ಟಿದ್ದಾರೆ. ಪ್ರಭಾತನಗರದ ಮೂಡಗಣಪತಿ ದೇವಾಲಯದಲ್ಲಿ ಸಂಪ್ರದಾಯದ ಪ್ರಕಾರ ಲೋಕೇಶ ಮೇಸ್ತಾ ಹಾಗೂ ಅಕ್ಷತಾ ಮೇಸ್ತ ಅವರ ಮದುವೆ ಆಗಿದ್ದು ಲೋಕೇಶ ಮೇಸ್ತ ಅವರ ಅಕ್ಕ ಸುವರ್ಣ ಖಾರ್ವಿ, ಸೀಮಾ, ಮಾವ ಪರಮೇಶ್ವರ ಮೇಸ್ತಾ, ಪತಿಯ ಅಣ್ಣ ವಿಶ್ವನಾಥ ಮೇಸ್ತ ಮದುವೆ ಮುಂದಾಳತ್ವದಲ್ಲಿ ಈ ಮದುವೆ ನಡೆದಿದೆ. ಗಂಡಿನ ಕಡೆಯವರ ಸೂಚನೆ ಮೇರೆಗೆ ಹೆಣ್ಣಿನ ಕಡೆಯವರು ಎಲ್ಲಾ ಖರ್ಚು ನೋಡಿಕೊಂಡಿದ್ದರೂ ಸರಿಯಾಗಿ ಸಂಸಾರ ನಡೆದಿದ್ದು ಒಂದು ತಿಂಗಳು ಮಾತ್ರ.
ಮದುವೆ ನಂತರ ಅಕ್ಷತಾ ಅವರನ್ನು ಲೋಕೇಶ್ ಮೇಸ್ತಾ ಅವರು ಮಲಬಾರಕೇರಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಒಂದು ತಿಂಗಳ ಸಂಸಾರ ಮಾಡಿದ್ದಾರೆ. ಅದಾದ ನಂತರ ಪ್ರಭಾತ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದು, ಅಲ್ಲಿಂದ ಪತ್ನಿ ಮೇಲೆ ಹಲ್ಲೆ ನಡೆಸಲು ಶುರು ಮಾಡಿದ್ದಾರೆ. ಅಕ್ಷತಾ ಅವರ ಮೇಲೆ ಅನಗತ್ಯ ಅನುಮಾನಪಡುವ ಲೋಕೇಶ್ ಮೇಸ್ತಾ ಅವರು ಸದ್ಯ `ಆ ಮಗು ಸಹ ನನ್ನದಲ್ಲ’ ಎನ್ನುತ್ತಿದ್ದಾರೆ. ಗಂಡನ ಮನೆಯಲ್ಲಿ ಸೀಮಂತ ಮುಗಿಸಿ ತವರಿಗೆ ಹೋಗಿದ್ದ ಅಕ್ಷತಾ ಮೇಸ್ತಾ ಅವರನ್ನು ನೋಡಲು ಸಹ ಲೋಕೇಶ್ ಮೇಸ್ತ ಅವರು ಬಂದಿಲ್ಲ. ಮಗು ಜನನದ ನಂತರ ಮಗುವಿನ ಮುಖವನ್ನು ನೋಡಿಲ್ಲ. ಮಗಳ ವೈವಾಹಿಕ ಜೀವನದಿಂದ ಬೇಸತ್ತ ಶಾರದಾ ಮೇಸ್ತ ಅವರು ಈ ಬಗ್ಗೆ ಲೋಕೇಶ ಮೇಸ್ತ ಅವರ ಅಕ್ಕ-ಮಾವನ ಬಳಿ ಮಾತನಾಡಿದ್ದಾರೆ. ಆದರೆ, ಅಕ್ಕ ಸುವರ್ಣ ಖಾರ್ವಿ, ಸೀಮಾ, ಮಾವ ಪರಮೇಶ್ವರ ಮೇಸ್ತಾ, ಗಂಡನ ಅಣ್ಣ ವಿಶ್ವನಾಥ ಮೇಸ್ತಾ ಹಾಗೂ ಅತ್ತಿಗೆ ಶ್ವೇತಾ ಮೇಸ್ತಾ ಅವರಲ್ಲಿ ನೋವು ಹೇಳಿಕೊಂಡರೂ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಲೋಕೇಶ್ ಮೇಸ್ತ ಅವರಿಗೆ ತಿಳಿಸಿ ಹೇಳುವ ಬದಲು `ನೀನೇ ಹೊಂದುಕೊoಡು ಹೋಗಬೇಕು’ ಎಂದು ಅಕ್ಷತಾ ಮೇಸ್ತ ಅವರಿಗೆ ಅವರೆಲ್ಲರೂ ಕಿವಿಮಾತು ಹೇಳಿದ್ದಾರೆ.
ಈ ಎಲ್ಲದರ ನಡುವೆ ಲೋಕೇಶ ಮೇಸ್ತ ಅವರು ಬೇರೆ ಬೇರೆ ಮಹಿಳೆಯರ ಜೊತೆ ಸಂಬoಧಹೊoದಿರುವ ಬಗ್ಗೆ ಅಕ್ಷತಾ ಮೇಸ್ತ ಅವರಿಗೆ ಮಾಹಿತಿ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ `ನಾನು ಇರುವುದೇ ಹಾಗೇ’ ಎಂದು ಲೋಕೇಶ ಮೇಸ್ತ ಉಡಾಫೆಯಾಗಿ ಮಾತನಾಡಿದ್ದಾರೆ. ಅಕ್ಷತಾ ಮೇಸ್ತಾ ಅವರು ಗರ್ಭಿಣಿಯಾಗಿದ್ದಾಗ ಸಹ ಬಿಡದೇ ಹಿಂಸೆ ನೀಡಿದ್ದಾರೆ. ಮಗು ಜನನದ ನಂತರ ನಾಮಕರಣ ವಿಷಯವಾಗಿ ಆಸ್ಪತ್ರೆಯಲ್ಲಿಯೇ ಜಗಳ ಮಾಡಿದ್ದು, `ಅನೈತಿಕ ಸಂಬAಧದ ಮಗು’ ಎಂದು ನಿಂದಿಸಿದ್ದಾರೆ. ಈ ವೇಳೆ ಅಕ್ಷತಾ ಮೇಸ್ತ ಅವರು `ಡಿಎನ್‌ಎ ಪರೀಕ್ಷೆ ಮಾಡಿಸೋಣ’ ಎಂದು ಹೇಳಿದಾ ಅದಕ್ಕೆ ಒಪ್ಪಿಲ್ಲ. ಈ ಎಲ್ಲಾ ಅನ್ಯಾಯದ ಬಗ್ಗೆ ಅಕ್ಷತಾ ಮೇಸ್ತ ಅವರು ಕೊಂಕಣ ಖಾರ್ವಿ ಸಮಾಜದವರಲ್ಲಿ ದೂರು ನೀಡಿದ್ದು, ಸಮಾಜದ ಮುಖಂಡರು ಕರೆದರೂ ಲೋಕೇಶ ಮೇಸ್ತ ಅವರು ಮಾತುಕಥೆಗೆ ಬಂದಿಲ್ಲ. ಹೀಗಾಗಿ ಅಕ್ಷತಾ ಮೇಸ್ತ ಅವರು ಗಂಡನ ವಿರುದ್ಧ ಸಾಂತ್ವಾನ ಕೇಂದ್ರದಲ್ಲಿ ದೂರು ನೀಡಿದ್ದಾರೆ. ಅದಾದ ನಂತರ ಲೋಕೇಶ್ ಅವರು ಅಕ್ಷತಾ ಅವರು ವಾಸವಿದ್ದ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಗಂಡನ ಕಾಟ ಸಹಿಸಲಾಗದೇ ಅಕ್ಷತಾ ಮೇಸ್ತಾ ಅವರು ವಿವಾಹ ವಿಚ್ಚೇದನ ಹಾಗೂ ಜೀವನಾಂಶ ಕೋರಿ ಅರ್ಜಿ ಹಾಕಿದ್ದು, `ಪೊಲೀಸ್ ದೂರು ಕೊಟ್ಟರೆ ಕಾರು ಹತ್ತಿಸಿ ಕೊಲೆ ಮಾಡುವೆ’ ಎಂದು ಲೋಕೇಶ ಮೇಸ್ತ ಅವರು ಬೆದರಿಸಿದ್ದಾರೆ. ಇದಲ್ಲದೇ ನ್ಯಾಯಾಲಯದ ವಿಚಾರಣೆ ಹಾಗೂ ಎದುರು ಸಿಕ್ಕಾಗಲೆಲ್ಲ ಅಕ್ಷತಾ ಮೇಸ್ತಾ ಅವರನ್ನು ನಿಂದಿಸುತ್ತಿದ್ದಾರೆ. ಈ ಎಲ್ಲಾ ಹಿನ್ನಲೆ ರಕ್ಷಣೆ ಕೋರಿ ಅಕ್ಷತಾ ಮೇಸ್ತಾ ಅವರು ಪೊಲೀಸರ ಮೊರೆ ಹೋಗಿದ್ದಾರೆ.