ಶಿರಸಿಯ ಶ್ರೀಸಾಯಿ ಸಂಗೀತ ವಿದ್ಯಾಲಯ ಈ ವರ್ಷ 44ನೇ ವಸಂತಕ್ಕೆ ಕಾಲಿರಿಸಿದೆ. ಈ ವಾರ್ಷಿಕ ಉತ್ಸವ ಹಾಗೂ ಹುತಗಾರ ಸ್ವರ ಸಂಗಮ ವಿದ್ಯಾಲಯದ ಸಂಯುಕ್ತ ಸಂಗೀತ ಸಮ್ಮೇಳನ ಒಟ್ಟಿಗೆ ನಡೆದಿದೆ. ಈ ಎರಡೂ ಕಾರ್ಯಕ್ರಮಗಳ ಅಂಗವಾಗಿ ವೆಂಕಟ್ರಮಣ ದೇವಸ್ಥಾನದ ಕೆಳ ಆವರಣ ಸಂಗೀತದಿoದ ಮೊಳಗಿದ್ದು, ಅಲ್ಲಿನ ಗಾಯನಕ್ಕೆ ಜನ ತಲೆದೂಗಿದ್ದಾರೆ.
ಸಂಗೀತ ಕಾರ್ಯಕ್ರಮಗಳ ಜೊತೆಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಾಟಕ ಕಲಾವಿದ ವಿಶ್ವನಾಥ ಹೆಗಡೆ ಕಾನಳ್ಳಿ ಮತ್ತು ಜಿ ವಿ ಹೆಗಡೆ ಕುಂಬ್ರಿ ಅವರನ್ನು ಸನ್ಮಾನಿಸಲಾಗಿದೆ. ಕಾರ್ಯಕ್ರಮದ ಆಧ್ಯಕ್ಷತೆವಹಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ, ಮೊಕ್ತೇಸರ ವಿಷ್ಣುದಾಸ ಕಾಸರಗೋಡ ಅವರು `ಇಲ್ಲಿನ ರಾಯರ ಪೇಟೆಯ ಐದು ದೇವಸ್ಥಾನಗಳ ನಡುವೆ ಇದ್ದು ಸಂಗೀತ ತರಗತಿ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಮಾಡಿದ ಶ್ರೇಯಸ್ಸು ಸಾಯಿ ಸಂಗೀತ ವಿದ್ಯಾಲಯಕ್ಕಿದೆ. ಈ ವಿದ್ಯಾಲಯದ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ’ ಎಂದು ಬಣ್ಣಿಸಿದರು. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ `ತಾಯಂದಿರು ಶಾಸ್ತ್ರೀಯ ಸಂಗೀತ ಕಲಿತರೆ ಮಕ್ಕಳು ಅವರನ್ನು ಸ್ವಾಭಾವಿಕವಾಗಿಯೇ ಅನುಸರಿಸುತ್ತಾರೆ ಎಂದರು. ಯಮುನಾ ರಂಗನಾಥ ಹೆಗಡೆ ಶೀಗೇಹಳ್ಳಿ ಅವರು ಹಾಜರಿದ್ದರು.
ಅತಿಥಿ ಕಲಾವಿದರಾಗಿ ಪ್ರಸಿದ್ಧ ಗಾಯಕಿ ರಾಧಾ ದೇಸಾಯಿ ಧಾರವಾಡ, ಶ್ರೀಪಾದ ಹೆಗಡೆ ಸೋಮನಮನೆ ಗಾಯನ ಪ್ರಸ್ತುತಪಡಿಸಿದರು. ತಬಲಾ ಸಾಥ್ ನಲ್ಲಿ ಅಕ್ಷಯ್ ಭಟ್ ಅಂಸಳ್ಳಿ, ಹಾರ್ಮೋನಿಯಂ ಸಾಥ್‌ನಲ್ಲಿ ಭರತ್ ಹೆಗಡೆ ಹೆಬ್ಬಲಸು ಸಹಕರಿಸಿದರು. ದಿನವಿಡೀ ಸಂಗೀತ ಶಾಲೆಯ ಹಿರಿಕಿರಿಯ ವಿದ್ಯಾರ್ಥಿಗಳಿಂದ ಗಾಯನ ವಾದನ ಕಾರ್ಯಕ್ರಮಗಳು ಜರುಗಿದವು. ಸಾಯಿ ಸಂಗೀತ ವಿದ್ಯಾಲಯದ ಪ್ರಾಚಾರ್ಯರ ಎಂ ಪಿ ಹೆಗಡೆ ಪಡಿಗೆರೆ ಅವರು ಕಾರ್ಯಕ್ರಮದ ಕೊನೆಯಲ್ಲಿ ಗಾಯನ ಪ್ರಸ್ತುತಪಡಿಸಿದರು. ಸ್ವರ ಸಂಗಮ ವಿದ್ಯಾಲಯದ ಪ್ರಾಚಾರ್ಯ ದಿನೇಶ ಹೆಗಡೆ ವಂದಿಸಿದರು.