ಆನ್‌ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಮೇ 20ರಂದು ದೇಶದ ಎಲ್ಲಡೆ ಔಷಧ ವ್ಯಾಪಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಜನೌಷಧಿ ಕೇಂದ್ರಗಳು ಈ ಮುಷ್ಕರದಿಂದ ದೂರ ಉಳಿದಿವೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪೋಲೋ, ಮೆಡ್ ಪ್ಲಸ್ ಮೊದಲಾದ ಔಷಧ ಮಳಿಗೆಗಳು ಬಾಗಿಲು ತೆರೆದು ಸೇವೆ ಕೊಡಲಿದೆ.
ಆನ್‌ಲೈನ್ ಮೂಲಕ ಔಷಧ ಮಾರಾಟ ಹಾಗೂ ಅಧಿಕ ರಿಯಾಯಿತಿ ವಿರೋಧಿಸಿ ರಾಜ್ಯದಲ್ಲಿ 20ಸಾವಿರಕ್ಕೂ ಅಧಿಕ ಔಷಧಿ ಅಂಗಡಿಯವರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಅಖಿಲ ಭಾರತ ರಸಾಯನಶಾಸ್ತ್ರಜ್ಞರು ಮತ್ತು ರೋಗನಿರ್ಣಯಕಾರರ ಒಕ್ಕೂಟ (AIOCD) ಹಾಗೂ ಕರ್ನಾಟಕ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಅಸೋಸಿಯೇಷನ್ (KCDA) ಈ ಮುಷ್ಕರಕ್ಕ ಕರೆ ನೀಡಿದೆ. ಆನ್‌ಲೈನ್ ಕಂಪನಿಗಳು ನಿಯಮ’ಬಾಹಿರವಾಗಿ ಔಷಧಿ ಮಾರಾಟ ಮಾಡುತ್ತಿದ್ದು, ಸಣ್ಣ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆ ತರುತ್ತಿವೆ’ ಎಂಬುದು ಅವರ ಆರೋಪವಾಗಿದೆ.
ಈ ಮುಷ್ಕರದ ಹಿನ್ನಲೆ ಸಾರ್ವಜನಿಕರಿಗೆ ಸಮಸ್ಯೆ ಆಗುವುದನ್ನು ಅರಿತು ಜಿಲ್ಲಾ ಔಷಧ ನಿಯಂತ್ರಕರು ತುರ್ತು ಸಂದೇಶ ರವಾನಿಸಿದ್ದಾರೆ. ಅದರ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿನ ಜನೌಷಧಿ ಕೇಂದ್ರಗಳು ಹಾಗೂ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳಿಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದವರು ಮಾಹಿತಿ ನೀಡಿದ್ದಾರೆ.