ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನದ ವೇಳೆ ಮಳೆಯಾಗುತ್ತಿದೆ. ಗುರುವಾರವೂ ಸಂಜೆ ವೇಳೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಜೋರು ಮಳೆಯಾಗುವ ಲಕ್ಷಣಗಳಿವೆ.
ಹಮಾಮಾನ ಮುನ್ಸೂಚನಾ ನಕ್ಷೆಯ ಪ್ರಕಾರ ಕರಾವಳಿ ಹಾಗೂ ಮಲೆನಾಡು ಭಾಗದ ಅನೇಕ ಕಡೆ ಮೇ 14ರ ಮಧ್ಯಾಹ್ನ ಗುಡುಗುಸಹಿತ ಮಳೆಯಾಗಲಿದೆ. ಶಿರಸಿ, ಸಿದ್ದಾಪುರ, ಮುಂಡಗೋಡ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿ ಮಧ್ಯಾಹ್ನದ ನಂತರ ಮಳೆಯಾಗುವ ಲಕ್ಷಣಗಳು ಹೆಚ್ಚಿವೆ. ಮೇ 15ರ ಬೆಳಗಿನವರೆಗೂ ಉತ್ತರ ಕನ್ನಡದ ಒಳನಾಡಿನ ಭಾಗಗಳಲ್ಲಿ ಮಿಂಚಿನ ಸಾಂದ್ರತೆಗಳಿವೆ. ಮಲೆನಾಡು ಪ್ರದೇಶಗಳಾದ ಶಿರಸಿ, ಸಿದ್ದಾಪುರ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಗುಡುಗುಸಹಿತ ಭಾರೀ ಪ್ರಮಾಣದ ಮಿಂಚಿನ ಜೊತೆ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿ ಸಮುದ್ರದ ತೇವಾಂಶದೊAದಿಗೆ ಮಿಂಚಿನ ಆರ್ಭಟ ಹೆಚ್ಚಿರಲಿದೆ ಎಂದು ವೈಜ್ಞಾನಿಕ ಸಮೀಕ್ಷೆ ಹೇಳಿದೆ.
`ಮಿಂಚು ಬರುವಾಗ ಎತ್ತರದ ಮರಗಳು ಅಥವಾ ವಿದ್ಯುತ್ ಕಂಬಗಳ ಕೆಳಗೆ ನಿಲ್ಲಬೇಡಿ’ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಗುಡುಗು ಆರಂಭವಾದಾಗ ಟಿವಿ, ಫ್ರಿಡ್ಜ್ ಮುಂತಾದ ವಿದ್ಯುತ್ ಚಾಲಿತ ಉಪಕರಣಗಳ ಪ್ಲಗ್‌ಗಳನ್ನು ತೆಗೆಯುವುದು ಸೂಕ್ತ. ಗದ್ದೆ ಅಥವಾ ತೋಟಗಳಲ್ಲಿ ಕೆಲಸ ಮಾಡುವವರು ತಕ್ಷಣವೇ ಸುರಕ್ಷಿತ ಕಟ್ಟಡಗಳ ಒಳಗೆ ತೆರಳುವುದು ಒಳಿತು. ಕೆರೆ, ಹಳ್ಳ ಅಥವಾ ನೀರಿರುವ ಪ್ರದೇಶಗಳ ಸಮೀಪ ಸುಳಿಯುವುದು ಸಹ ಅಪಾಯಕಾರಿ. ಇನ್ನೂ, ಮಳೆ ಮತ್ತು ಮಿಂಚಿನ ವೇಳೆ ವಾಹನಗಳನ್ನು ಬಯಲು ಪ್ರದೇಶದಲ್ಲಿ ನಿಲ್ಲಿಸುವುದು ಸುರಕ್ಷಿತ. ಸದ್ಯ ಜಿಲ್ಲೆಯ ಉಳಿದ ತಾಲೂಕುಗಳಲ್ಲಿಯೂ ಸಾಧಾರಣ ಮಿಂಚು-ಮಳೆ ಕಾಣಿಸುವ ಸಾಧ್ಯತೆಗಳಿವೆ.