ಮೋಜು ಮಸ್ತಿಗಾಗಿ ಗೋಕರ್ಣಕ್ಕೆ ಬಂದಿದ್ದ ನಾಲ್ವರು ನಶೆಯ ಗುಂಗಿನಲ್ಲಿರುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದು, ಆ ನಾಲ್ವರನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆ ಮಾಡಿದೆ. ಪೊಲೀಸರು ಸಂಗ್ರಹಿಸಿದ್ದ ಸಾಕ್ಷಿಯ ನೈಜತೆ ಆಧಾರದಲ್ಲಿ ನ್ಯಾಯವಾದಿ ರಂಜನ್ ನಾಯಕ ಅವರು ವಾದ ಮಂಡಿಸಿದ್ದು, ಆ ವಾದ ಒಪ್ಪಿದ ನ್ಯಾಯಾಲಯ ಆರೋಪಿತರನ್ನು ದೋಷಮುಕ್ತಗೊಳಿಸಿದೆ.
2024ರಲ್ಲಿ ಹೊರ ರಾಜ್ಯದ ನಾಲ್ಕು ಜನ ಪ್ರವಾಸಿಗರು ಗೋಕರ್ಣಕ್ಕೆ ಬಂದಿದ್ದರು. ಮುಖ್ಯ ಕಡಲತೀರದ ರೆಸಾರ್ಟ ಒಂದರಲ್ಲಿ ವಾಸ್ತವ್ಯವಿದ್ದಾಗ ಅಲ್ಲಿ ಪೊಲೀಸರು ದಾಳಿ ಮಾಡಿದ್ದರು. ಆ ವೇಳೆ ಅಲ್ಲಿದ್ದ ತಂಗಿದ್ದ ಸೌರಭಕುಮಾರ ಶರ್ಮಾ, ಪಲ್ಲಿವಿಕಾಸ, ರಾಮಕೃಷ್ಣಬಾಬು, ವಿನಯಾ ಶೇಖರ ಎಂಬಾತರು ನಶೆಯಲ್ಲಿದ್ದರು. ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಗಾಂಜಾ ಸೇವನೆ ದೃಢವಾಗಿತ್ತು. ಆದರೆ, ಆ ಆರೋಪಿತರು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿರಲಿಲ್ಲ. ಅದಾಗಿಯೂ, ಪೊಲೀಸರು ಅವರೆಲ್ಲರ ಮೇಲೆ ಕೇಸು ದಾಖಲಿಸಿದ್ದರು. ಕುಮಟಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಮಾದಕ ವ್ಯಸನ ಸೇವಿಸುರುವ ಬಗ್ಗೆ ಇದ್ದ ದಾಖಲೆಗಳನ್ನು ಹಾಜರುಪಡಿಸಿದ್ದರು. ಆ ಎಲ್ಲಾ ಆರೋಪಿತರ ಪರ ನ್ಯಾಯವಾದಿ ರಂಜನ ನಾಯಕ ನಾಡುಮಾಸ್ಕೇರಿ ಅವರು ವಾದ ಮಂಡಿಸಿದ್ದು, ಇದಕ್ಕೂ ಮೊದಲು ಅವರು ತಮ್ಮ ಕಕ್ಷಿದಾರರ ಬಳಿ ವಿವಿಧ ಪ್ರಶ್ನೆ ಕೇಳಿದರು.
`ನಾವು ಗಾಂಜಾ ಸೇವಿಸಿಲ್ಲ’ ಎಂದು ಆ ನಾಲ್ವರು ವಕೀಲರ ಬಳಿ ಹೇಳಿದ್ದರು. ಗಾಂಜಾ ಸೇವನೆ ಮಾಡದಿದ್ದರೂ ಮೂತ್ರ ಪರೀಕ್ಷೆಯಲ್ಲಿ ಮಾದಕ ವ್ಯಸನ ಸೇವನೆ ದೃಢವಾದ ಬಗ್ಗೆ ರಂಜನ್ ನಾಯಕ ಅವರು ಅಧ್ಯಯನ ನಡೆಸಿದರು. ಆಗ, ಔಷಧ ಸೇವಿಸಿದರೂ ಸಹ ಮೂತ್ರ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬರುವುದನ್ನು ಕಂಡುಕೊ0ಡರು. ಅದಾದ ನಂತರ ಈ ಪ್ರಕರಣ ವಿಷಯವಾಗಿ ರಂಜನ ನಾಯಕ ಅವರು ನ್ಯಾಯಾಲಯದಲ್ಲಿ ವೈದ್ಯರನ್ನು ಮಾತನಾಡಿಸಿದರು. `ಮೂತ್ರ ತಪಾಸಣೆಯಿಂದ ಗಾಂಜಾ ಸೇವನೆ ದೃಢ ಎಂದು ಶೇ 100ರಷ್ಟು ನಿಖರವಾಗಿ ಹೇಳಲು ಸಾಧ್ಯವಿಲ್ಲ’ ಎಂದು ವೈದ್ಯರು ವಿವರಿಸಿದರು. ಮೂತ್ರ ಪರೀಕ್ಷೆ ಮಾಡುವ ಸಾಧನದ ಶುಚಿತ್ವ ಹಾಗೂ ಅದರ ಮಾನದಂಡವನ್ನು ನ್ಯಾಯವಾದಿ ರಂಜನ್ ನಾಯಕ ಅವರು ಪ್ರಶ್ನಿಸಿದರು. `ತೂಕದ ಯಂತ್ರವನ್ನು ಸಹ ಆಗಾಗ ತಪಾಸಣೆ ಮಾಡಲಾಗುತ್ತದೆ. ಆದರೆ, ವೈದ್ಯಕೀಯ ಯಂತ್ರದ ತಪಾಸಣೆ ನಡೆಯದಿರುವುದು ಹಾಗೂ ಅದರ ಮಾನದಂಡ ಸರಿಯಿಲ್ಲದಿರುವುದು ಸಮಸ್ಯೆ’ ಎಂದು ನ್ಯಾಯವಾದಿಗಳು ಕೋರ್ಟಿನ ಗಮನಸೆಳೆದರು.
ಇದರೊಂದಿಗೆ ಮಾದಕ ವ್ಯಸನ ಸೇವನೆ ಪ್ರಕರಣದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನೀಡಿದ ಆದೇಶವನ್ನು ಉಲ್ಲೇಖಿಸಿ ವಾದ ಮಂಡಿಸಿದರು. `ಕೇವಲ ಮೂತ್ರ ಪರೀಕ್ಷೆಯಿಂದ ಗಾಂಜಾ ಸೇವನೆ ದೃಢ ಎನ್ನಲು ಸಾಧ್ಯವಿಲ್ಲ. ರಕ್ತ ಪರೀಕ್ಷೆ ಹಾಗೂ ಗ್ಯಾಸ್ ಕ್ರೊಮೆಟೋಗ್ರಾಫಿಯಿಂದ ಮಾತ್ರ ಗಾಂಜಾ ಸೇವನೆಯನ್ನು ಶೇ 100ರಷ್ಟು ದಾಖಲೆಗಳೊಂದಿಗೆ ದೃಢಪಡಿಸಲು ಸಾಧ್ಯವಿದೆ’ ಎಂದು ನ್ಯಾಯವಾದಿ ರಂಜನ್ ನಾಯಕ ಅವರು ವಾದಿಸಿದರು. ಈ ವಾದ ಆಲಿಸಿದ ನ್ಯಾಯಾಲಯವೂ ಆ ನಾಲ್ವರು ಆರೋಪಿತರನ್ನು ಖುಲಾಸೆ ಮಾಡಿತು. `ಗಾಂಜಾ ಸೇವನೆ ಅನುಮಾನವಿದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ, ವೈದ್ಯಕೀಯ ವರದಿ ಪಡೆಯುತ್ತಾರೆ. ಈ ಪ್ರಕರಣದಲ್ಲಿ 10 ಸಾವಿರ ರೂ ದಂಡ ವಿಧಿಸಲಾಗುತ್ತದೆ. ಆದರೆ, ತನ್ನ ಕಕ್ಷಿದಾರರು ನಿಜವಾಗಿಯೂ ಗಾಂಜಾ ಸೇವಿಸಿರಲಿಲ್ಲ. ಹೀಗಾಗಿ ಅವರು 10 ಸಾವಿರ ರೂ ದಂಡ ಪಾವತಿಸದೇ ಪ್ರಕರಣದಲ್ಲಿ ಹೋರಾಟ ನಡೆಸಿದರು. ಅವರೆಲ್ಲರೂ ಹೊರ ರಾಜ್ಯದವರಾಗಿದ್ದು, ಜಾರ್ಖಂಡ್ ಹಾಗೂ ಆಂದ್ರ ಪ್ರದೇಶದಿಂದ ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. ಈ ಪ್ರಯಾಣಕ್ಕಾಗಿಯೇ ಅವರು 4 ಲಕ್ಷ ರೂ ಹಣ ವೆಚ್ಚ ಮಾಡಿದ್ದಾರೆ. ತಮ್ಮ ಮೇಲಿದ್ದ ಆರೋಪದಿಂದ ಮುಕ್ತರಾಗಲು ಅವರು ಈ ಹೋರಾಟ ನಡೆಸಿದ್ದು, ಅವರಿಗೆ ನ್ಯಾಯ ಒದಗಿಸಿದ ತೃಪ್ತಿ ನನಗಿದೆ’ ಎಂದು ನ್ಯಾಯವಾದಿ ರಂಜನ ನಾಯಕ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಪ್ರತಿಕ್ರಿಯಿಸಿದರು.