ಹಳಿಯಾಳದಲ್ಲಿಯೂ ಭಾರೀ ಪ್ರಮಾಣದಲ್ಲಿ ಗಾಳಿ-ಮಳೆ ಸುರಿಯುತ್ತಿದ್ದು, ಮಂಗಳವಾಡ ಬಳಿ ಭಾನುವಾರ ಸಿಡಿಲಿನ ಸ್ಪರ್ಶಕ್ಕೆ ಮೂರು ಹಸುಗಳು ಸಾವನಪ್ಪಿದೆ. ಮಂಗಳವಾಡ ಪ್ರೌಢಶಾಲೆಯ ಮೇಲ್ಚಾವಣಿ ಸಹ ಗಾಳಿಗೆ ಹಾರಿ ಹೋಗಿದೆ.
ಭಾನುವಾರ ಸಂಜೆ ದಿಢೀರ್ ಆಗಿ ಗಾಳಿ-ಮಳೆ ಶುರುವಾಗಿದ್ದು, ಜನ ಜೀವನಕ್ಕೆ ಸಮಸ್ಯೆಯಾಗಿದೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ರೋಮನ್ ಬಾವಟಿಸ್ ದಾಲ್ಮೆತ್ ಅವರ ಜಾನುವಾರುಗಳು ಸಿಡಿಲಿಗೆ ಸಾವನಪ್ಪಿದೆ. ಇದರಿಂದ ಜಾನುವಾರು ಮಾಲಕರು ಲಕ್ಷಾಂತರ ರೂ ನಷ್ಟ ಅನುಭವಿಸಿದ್ದಾರೆ.
ಇದೇ ವೇಳೆ ಭಾರೀ ಗಾಳಿಗೆ ಮಂಗಳವಾಡ ಪ್ರೌಢಶಾಲೆಯ ಮೇಲ್ಚಾವಣಿ ಕಿತ್ತು ಬಿದ್ದಿದೆ. ಶಾಲಾ ಕಟ್ಟಡದ ಒಳಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ಗೋಡೆಗಳು ತೇವಗೊಂಡಿದೆ. ಶಾಲೆಗೆ ಆದ ಹಾನಿ ಬಗ್ಗೆ ಶಿಕ್ಷಣಾಧಿಕಾರಿಗಳು ಮಾಹಿತಿಪಡೆದಿದ್ದಾರೆ. ಸಿಡಿಲಿನ ಸ್ಪರ್ಶದಿಂದ ಸಾವನಪ್ಪಿದ ಜಾನುವಾರು ಮಾಲಕರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.