ಬೆಂಗಳೂರಿಗೆ ಹೋಗಿದ್ದ ಭಟ್ಕಳದ ದೀಪಾಲಿ ಗೊಂಡ ಅವರು ಕೆ ಆರ್ ಪುರಂ ಬಳಿ ನಡೆದ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಏಳು ತಿಂಗಳ ಹಿಂದೆ ಉದ್ಯೋಗ ಅರೆಸಿ ಹೋಗಿದ್ದ ಅವರು ಸಹೋದ್ಯೋಗಿಯೊಬ್ಬರ ಮದುವೆಗೆ ಹೋಗಿ ಮರಳುವಾಗ ದುರಂತ ಅಂತ್ಯ ಕಂಡಿದ್ದಾರೆ.
ಭಟ್ಕಳದ ಬೆಳಕೆ ಗ್ರಾಮದ ಕಾನುಬದ್ಲು ಬೊಮ್ಮನಕೆರೆಯಲ್ಲಿ ದೀಪಾಲಿ ಗುರು ಗೊಂಡ ಅವರು ವಾಸವಾಗಿದ್ದರು. 22 ವರ್ಷದ ಅವರು ಉದ್ಯೋಗ ಹುಡುಕುತ್ತಿದ್ದು, ಬೆಂಗಳೂರಿನ ಖಾಸಗಿ ಕಂಪನಿ ಅವರಿಗೆ ಅವಕಾಶ ನೀಡಿತ್ತು. ಹೀಗಾಗಿ ಏಳು ತಿಂಗಳ ಹಿಂದೆ ಅವರು ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದರು. ಹೀಗಿರುವಾಗ ಪರಿಚಯಸ್ಥರೊಬ್ಬರ ಮದುವೆಗೆ ಹೋಗಲು ದೀಪಾಲಿ ಅವರು ನಿರ್ಧರಿಸಿದ್ದರು. ಅವರ ಕಚೇರಿಯಲ್ಲಿ ಕೆಲಸ ಮಾಡುವ ಇನ್ನಿತರ ಸ್ನೇಹಿತರ ಜೊತೆ ಅವರು ಟಿಟಿ ವಾಹನದಲ್ಲಿ ಮದುವೆಗೆ ಹೋಗಿದ್ದರು. ಮದುವೆ ಮುಗಿಸಿ ಮರಳುವಾಗ ಆ ಟಿಟಿ ವಾಹನಕ್ಕೆ ಲಾರಿಯೊಂದು ಗುದ್ದಿತು.
ರಸ್ತೆ ಬದಿ ಟಿಟಿ ವಾಹನ ನಿಲ್ಲಿಸಿದ್ದ ಚಾಲಕ ಅದರಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ಸೂಚಿಸಿದ್ದರು. ಕೊನೆಯ ಮೂವರು ಪ್ರಯಾಣಿಕರು ಮಾತ್ರ ಟಿಟಿ ವಾಹನದಲ್ಲಿದ್ದು, ಅದರಲ್ಲಿ ದೀಪಾಲಿ ಅವರು ಸಹ ಒಬ್ಬರಾಗಿದ್ದರು. ಲಾರಿ ಗುದ್ದಿದ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದ್ದು, ಅದರೊಳಗೆ ಸಿಲುಕಿದ್ದರು. ಅವರ ಜೊತೆಗಿದ್ದ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡರು. ದೀಪಾಲಿ ಅವರ ದೇಹಕ್ಕೆ ದೊಡ್ಡ ಪೆಟ್ಟಾಗದೇ ಇದ್ದರೂ ತಲೆಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಅವರು ಪ್ರಜ್ಞೆ ತಪ್ಪಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು. ಈ ವೇಳೆ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಆಂಬುಲೆನ್ಸ ಬರಲು ತಡವಾಯಿತು. ರಕ್ಷಣಾ ಕಾರ್ಯಾಚರಣೆಗೂ ಜನ ಜಂಗುಳಿ ಅಡ್ಡಿಯಾಯಿತು.