ಸಿದ್ದಾಪುರದ ಪೂನಂ ಶೇಟ್ ಅವರ ಮನೆಗೆ ನುಗ್ಗಿ ಅವರಿಗೆ ಕತ್ತಿ ತೋರಿಸಿ ಚಿನ್ನ ಎಗರಿಸಿದ್ದ ದರೋಡೆಕೋರನ ಪತ್ತೆಯಾಗಿದೆ. ಕೊಂಡ್ಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಹೇಶ ಮಡಿವಾಳ ಆರೋಪಿಯಾಗಿದ್ದು, ಶಿರಸಿ-ಸಿದ್ದಾಪುರ ಪೊಲೀಸರ ಚುರುಕು ಕಾರ್ಯಾಚರಣೆಯಿಂದ ಮಹೇಶ ಮಡಿವಾಳ ಜೈಲು ಸೇರಿದ್ದಾರೆ.
ಸಿದ್ದಾಪುರದ ಹಾಳದಕಟ್ಟಾದಲ್ಲಿ ಪೂನಂ ಗಣಪತಿ ಶೇಟ್ ಅವರು ವಾಸವಾಗಿದ್ದರು. ಜೂನ್ 22ರಂದು ಸಂಜೆ ಅವರ ಮನೆಗೆ ನುಗ್ಗಿದ ಕೊಂಡ್ಲಿಯ ಮಹೇಶ ಹನುಮಂತ ಮಡಿವಾಳ ಅವರು ಪೂನಂ ಶೇಟ್ ಅವರಿಗೆ ಕತ್ತಿ ತೋರಿಸಿ ಬೆದರಿಸಿದ್ದರು. `ಕುತ್ತಿಗೆಯಲ್ಲಿರುವ ಸರ ಕೊಡು’ ಎಂದು ಹೆದರಿಸಿದ್ದು, ಆಗಂತುಕನಿAದ ಪೂನಂ ಶೇಟ್ ಅವರು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ, ಅದಕ್ಕೆ ಅವಕಾಶ ಕೊಡದ ಮಹೇಶ ಮಡಿವಾಳ ಸರ ತುಂಡರಿಸಿಕೊAಡು ಪರಾರಿಯಾಗಿದ್ದರು.
ಮನೆಗೆ ನುಗ್ಗಿ ಹೆದರಿಸಿ ದರೋಡೆ ಮಾಡಿದ ವ್ಯಕ್ತಿಯ ಗುರುತು-ಪರಿಚಯ ಪೂನಂ ಶೇಟ್ ಅವರಿಗೆ ಇರಲಿಲ್ಲ. ಅದಾಗಿಯೂ, ಅಪರಿಚಿತನಿಂದ ಆದ ಅನ್ಯಾಯದ ಬಗ್ಗೆ ಪೂನಂ ಶೇಟ್ ಅವರು ಪೊಲೀಸರಲ್ಲಿ ವಿವರಿಸಿದ್ದರು. ಅಂದಾಜು 3 ಲಕ್ಷ ರೂ ಮೌಲ್ಯದ ಚಿನ್ನದ ಸರ ದರೋಡೆ ನಡೆದ ಬಗ್ಗೆ ದೂರಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ವಿಶೇಷ ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮುಂದಾಳತ್ವದಲ್ಲಿ ತನಿಖೆ ಶುರು ಮಾಡಿಸಿದರು.
ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ, ಪಿಸೈ ನಾಗಪ್ಪ ಹಾಗೂ ಶಾಂತಿನಾಥ ಪಾಸಾನೆ ಅವರನ್ನು ಈ ಕಾರ್ಯಾಚರಣೆಗೆ ಬಳಸಿಕೊಂಡರು. ಎಸೈ ಸಂಗೀತಾ ಕಾನಡೆ, ರಮೇಶ ಗೌಡ, ಸಿಬ್ಬಂದಿ ಪ್ರಕಾಶ ಪಟಗಾರ, ರಮೇಶಪ್ಪಾ ಕೂಡಲ್ ಮಣಿಕಂಠ ಎಂ ಆರ್, ಗಿರೀಶಯ್ಯ ಎಂ ಎಸ್, ಪ್ರಕಾಶ ಮಲ್ಲಾಡದ, ನಾಗರಾಜ ತಿಮ್ಮಾಪುರ, ರವಿ ಕ್ಯಾಲಕೋಡ್ ಧನಂಜಯ ಮಡಿವಾಳ ಅವರ ಜೊತೆ ಶಿರಸಿ ನಗರ ಪೊಲೀಸ್ ಠಾಣೆಯ ರಾಮಯ್ಯ ಪೂಜಾರಿ, ಹನುಮಂತ ಮಂಕಾಪುರ ಅವರು ದರೋಡೆಕೋರನ ಬಗ್ಗೆ ಮಾಹಿತಿ ಕಲೆ ಹಾಕಿದರು.
ವಿವಿಧ ತಾಂತ್ರಿಕ ಮಾಹಿತಿ ಆಧರಿಸಿ ಶೋಧ ನಡೆಸಿದಾಗ ಸಿದ್ದಾಪುರ ಕೊಂಡ್ಲಿಯ ಮಹೇಶ ಹನುಮಂತ ಮಡಿವಾಳ ಅವರ ಮೇಲೆ ಅನುಮಾನ ಮೂಡಿತು. ತನಿಖೆ ವೇಳೆ ಮಹಿಳೆಯ ಮನೆಗೆ ನುಗ್ಗಿ ದರೋಡೆ ಮಾಡಿದ ಆರೋಪಿ ಮಹೇಶ ಮಡಿವಾಳ ಎಂಬುದು ಖಚಿತವಾಯಿತು. ಪೊಲೀಸರು ಕೂಡಲೇ ಆರೋಪಿಯನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು. ಕಳ್ಳತನ ಮಾಡಿದ್ದ ಚಿನ್ನದ ತಾಳಿ ಜೊತೆ ಮಹೇಶ ಮಡಿವಾಳರ ಬೈಕನ್ನು ಜಪ್ತು ಮಾಡಿದರು. ಸದ್ಯ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನವಿಧಿಸಿದೆ.