ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿಯೂ ಅಕ್ರಮ ಮರಳುಗಾರಿಕೆ ಮುಂದುವರೆದಿದೆ. ಜಲಚರಗಳಿಗೆ ಹಿಂಸೆ ಆಗುವ ರೀತಿ ಮರಳುಗಾರಿಕೆ ನಡೆಯುತ್ತಿದ್ದು, ಕಾರವಾರ ಕಾಳಿ ನದಿಯ ಮರಳು ಗೋವಾಗೆಗೆ ಸಾಗಾಟವಾಗುತ್ತಿದೆ.
ಕಾರವಾರ ತಾಲೂಕಿನ ಕದ್ರಾ ಮಾರ್ಗವಾಗಿ ಗೋವಾಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವೊಂದನ್ನು ತಹಶೀಲ್ದಾರ್ ನಿಶ್ಚಲ್ ನರೋನಾ ಅವರು ಮಂಗಳವಾರ ಹಿಡಿದಿದ್ದಾರೆ. ಸಂಜೆ ವೇಳೆ ಕದ್ದು ಮರಳು ಸಾಗಿಸುತ್ತಿದ್ದ ಪಿಕಪ್ ಅಸ್ನೋಟಿ ಬಳಿ ಸಿಕ್ಕಿ ಬಿದ್ದಿದೆ. ಸದ್ಯ ಮರಳು ತುಂಬಿದ ವಾಹನವನ್ನು ಕಾರವಾರ ತಹಶೀಲ್ದಾರ್ ಕಚೇರಿ ಬಳಿ ತರಲಾಗಿದ್ದು, ಅದರ ವಿಚಾರಣೆಗೆ ಅಲ್ಲಿ ಜನ ಜಮಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಇಲ್ಲ. ಮರಳು ಸಾಗಾಟದ ವಾಹನಕ್ಕೂ ವಿಶೇಷ ದಾಖಲೆಗಳಿರಲಿಲ್ಲ. ಈ ಹಿನ್ನಲೆ ಮರಳು ಗಾಡಿಯನ್ನು ಅಧಿಕಾರಿಗಳು ಹಿಡಿದಿದ್ದು, ಅದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಇನ್ನೂ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕಠಿಣ ಕ್ರಮವಾಗುತ್ತಿಲ್ಲ ಎಂಬ ಆರೋಪವೂ ಇದೆ. ಎಲ್ಲಡೆ ತಪಾಸಣಾ ಕೇಂದ್ರ, ಚೆಕ್‌ಪೋಸ್ಟ್ ಹಾಕಿದ್ದರೂ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಜನ ಆಗ್ರಹಿಸಿದ್ದಾರೆ.