ಹೊನ್ನಾವರ ಕರ್ಕಿಯ ಇಸ್ಮಾಯಲ್ ಸಾಬ್ ಅವರು ಕದ್ದು-ಮುಚ್ಚಿ ಸ್ಪೋಟಕಗಳನ್ನು ತಯಾರಿಸುತ್ತಿದ್ದು, ಅವರ ಮನೆ ಹಿಂದಿನ ಶೆಡ್ಡಿನೊಳಗೆ ಭಾರೀ ಪ್ರಮಾಣದ ಗಂಧಕದ ಪುಡಿ ದಾಸ್ತಾನು ನಡೆದಿದೆ. ಜೊತೆಗೆ ಇಸ್ಮಾಯಲ್ ಅವರು ಸ್ಪೋಟಕ ತಯಾರಿಕೆಗೆ ಅಗತ್ಯವಿರುವ ಇದ್ದಿಲು, ಬತ್ತಿ, ಕಾರ್ಡಬೋರ್ಡ ತುಂಬಿದ ಚೀಲವನ್ನು ಶೆಡ್ಡಿನೊಳಗೆ ಶೇಖರಿಸಿಟ್ಟಿದ್ದಾರೆ.
ಹೊನ್ನಾವರದ ಕರ್ಕಿಯ ನಡುಚಿಟ್ಟೆಯಲ್ಲಿ ಇಸ್ಮಾಯಲ್ ಯೂಸಬ್ ಸಾಬ್ ಅವರು ವಾಸವಾಗಿದ್ದಾರೆ. ಅವರು ವ್ಯಾಪಾರಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅದರ ಜೊತೆ ಸ್ಪೋಟಕಗಳನ್ನು ಸಿದ್ಧಪಡಿಸುವ ಕಳ್ಳ ದಂಧೆಯಲ್ಲಿಯೂ ಅವರು ಅತ್ಯಂತ ಆಸಕ್ತರಾಗಿದ್ದಾರೆ. ಸ್ಪೋಟಕಗಳನ್ನು ತಯಾರಿಸಲು ಅವರು ತಮ್ಮ ಮನೆ ಹಿಂದೆ ಪ್ರತ್ಯೇಕ ಶೆಡ್ ನಿರ್ಮಿಸಿದ್ದಾರೆ. ಅಲ್ಲಿ ಅನಧಿಕೃತವಾಗಿ ವಿವಿಧ ಸ್ಪೋಟಕ ಸಾಮಗ್ರಿಗಳನ್ನು ಶೇಖರಿಸಿಟ್ಟಿದ್ದಾರೆ.
ಸ್ಪೋಟಕಗಳ ತಯಾರಿಕೆಗೆ ಇಸ್ಮಾಯಲ್ ಸಾಬ್ ಅವರು ತರಬೇತಿಪಡೆದವರಲ್ಲ. ಅವರ ಬಳಿ ಸ್ಪೋಟಕ ಸಿದ್ಧಪಡಿಸುವ ಅನುಮತಿಯೂ ಇಲ್ಲ. ಅದಾಗಿಯೂ ಅವರು ಪಟಾಕಿ ತಯಾರಿಸಿಕೊಡುವುದಾಗಿ ಊರಿನಲ್ಲಿ ಹೇಳಿಕೊಂಡಿದ್ದಾರೆ. ಅವರ ಶೆಡ್ಡಿನೊಳಗೆ ಅಪಾಯಕಾರಿ ರೀತಿಯಲ್ಲಿ ಸ್ಪೋಟಕ ಸಾಮಗ್ರಿಗಳನ್ನು ತಂದಿರಿಸಿದ್ದಾರೆ. ಅವುಗಳ ಸ್ಪೋಟದಿಂದ ಭಾರೀ ಪ್ರಮಾಣದ ಅಪಾಯ ಸಂಭವಿಸುವ ಬಗ್ಗೆ ಅರಿವಿದ್ದರೂ ಸುರಕ್ಷತೆಗೆ ಆದ್ಯತೆ ಕೊಟ್ಟಿಲ್ಲ. ತಾವು ಮಾಡುವ ಕೆಲಸ ಅನಧಿಕೃತ ಎಂಬ ಅರಿವಿದ್ದರೂ ಆ ಕೆಲಸ ಬಿಟ್ಟಿಲ್ಲ.
ಹೊನ್ನಾವರ ಪಿಐ ಸಿದ್ದರಾಮೇಶ್ವರ ಎಸ್ ಅವರು ಜೂನ್ 29ರ ರಾತ್ರಿ 8.30ರ ವೇಳೆಗೆ ಕರ್ಕಿಗೆ ಹೋಗಿದ್ದಾರೆ. ಆ ವೇಳೆ ಅವರಿವರನ್ನು ಮಾತನಾಡಿಸಿದಾಗ ಇಸ್ಮಾಯಲ್ ಸಾಬ್ ಅವರ ಅಕ್ರಮ ಕೆಲಸದ ಬಗ್ಗೆ ಗೊತ್ತಾಗಿದೆ. ತಕ್ಷಣ ಸಿದ್ದರಾಮೇಶ್ವರ ಎಸ್ ಅವರು ತಮ್ಮ ತಂಡದ ಜೊತೆ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಆಗ, ಮನೆ ಹಿಂದಿನ ಶೆಡ್ಡಿನೊಳಗೆ ಪಟಾಕಿಗಳಂಥ ಸ್ಪೋಟಕಗಳನ್ನು ತುಂಬಿದ ಪ್ಲಾಸ್ಟಿಕ್ ಡ್ರಮ್ ಸಿಕ್ಕಿದೆ. ಇನ್ನಷ್ಟು ಪರಿಶೀಲನೆ ನಡೆಸಿದಾಗ ಕಾರ್ಡಬೋರ್ಡ ತುಂಬಿದ ಚೀಲ, ಪಟಾಕಿ ತುಂಬಿದ ಚೀಲ ಕಾಣಿಸಿದೆ. ಅದರೊಂದಿಗೆ 9 ಕೆಜಿ ಗಂಧಕದ ಪೌಡರ್, 600 ಗ್ರಾಂ ಇದ್ದಿಲ ಪುಡಿ, ಬತ್ತಿ ಹಾಗೂ ಸ್ಪೋಟಕಗನ್ನು ಸುತ್ತುವ ಉಂಡೆ ದೊರೆತಿದೆ.
ಅಷ್ಟು ಹೊತ್ತಿನವರೆಗೆ ಅಲ್ಲಿಯೇ ಅಡಗಿದ್ದ ಇಸ್ಮಾಯಲ್ ಸಾಬ್ ಅವರು ಪೊಲೀಸರನ್ನು ನೋಡಿ ಪರಾರಿಯಾಗಿದ್ದಾರೆ. ಅಲ್ಲಿರುವ ಸ್ಪೋಟಕ ಹಾಗೂ ಸಾಮಗ್ರಿಗಳನ್ನು ವಶಕ್ಕೆಪಡೆದ ಪೊಲೀಸರು ಇಸ್ಮಾಯಲ್ ಸಾಬ್ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.