ಬಾಂಬ್ ಸಿಡಿಸಿಕೊಂಡು ಭಸ್ಮವಾದ ಅಂಕೋಲಾ ನಾಗೇಂದ್ರ ಗೌಡ ಅವರ ಪ್ರಕರಣ ತನಿಖೆ ನಡೆಸಿದವರಿಗೆ ಮತ್ತೆ ಮೂರು ಬಾಂಬ್ ಸಿಕ್ಕಿದೆ. ಅಗಸೂರಿನ ಬಳಿ ಮಣ್ಣಿನ ಅಡಿ ಬಾಂಬ್ ಅಡಗಿಸಿರುವುದು ಪತ್ತೆಯಾಗಿದೆ. ಬಾಂಬ್ ನಿಷ್ಕ್ರಿಯ ದಳದವರು ಆಗಮಿಸಿ ಆ ಬಾಂಬ್ ಸ್ಪೋಟವಾಗದ ಹಾಗೇ ನಾಶ ಮಾಡಿದ್ದಾರೆ.
ಅಂಕೋಲಾದ ಹೆಬ್ಬುಳದ ನಾಗೇಂದ್ರ ಗೌಡ ಅವರು ತುಮಕೂರಿನಲ್ಲಿ ಬಾಂಬ್ ಸಿಡಿಸಿ ಆತ್ಮಹತ್ಯೆಗೆ ಶರಣಾದ ನಂತರ ಬಾಂಬ್ ಕುರಿತು ಎಲ್ಲಡೆ ಶೋಧ ನಡೆಯುತ್ತಿದೆ. ಪ್ರೇಯಸಿ ರಮ್ಯಾ ಅವರನ್ನು ಸಾಯಿಸುವುದಕ್ಕಾಗಿ ನಾಗೇಂದ್ರ ಗೌಡ ಅವರು ಉತ್ತರ ಕನ್ನಡ ಜಿಲ್ಲೆಯಿಂದಲೇ ಬಾಂಬ್ ತೆಗೆದುಕೊಂಡ ಹೋಗಿರುವುದು ಖಚಿತವಾಗಿದೆ. ನಾಗೇಂದ್ರ ಗೌಡ ಅವರ ಕುಟುಂಬದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾಗೇಂದ್ರ ಗೌಡ ಅವರ ಅತ್ತೆ ಮಕ್ಕಳಾದ ಹೊನ್ನಳ್ಳಿಯ ನಾರಾಯಣ ಗೌಡ ಹಾಗೂ ನಾಗರಾಜ ಗೌಡ ಅವರು ಸದ್ಯ ಪೊಲೀಸರ ವಶದಲ್ಲಿದ್ದಾರೆ. ಅಂಕೋಲ ತಾಲೂಕಿನ ಶಿರಗುಂಜಿಯ ಸಂದೀಪ್ ಗೌಡ ಅವರ ಜೊತೆ ನಾರಾಯಣ ಗೌಡ, ನಾಗರಾಜ ಗೌಡ ಅವರಲ್ಲಿಯೂ ಪೊಲೀಸರು ವಿವಿಧ ಪ್ರಶ್ನೆ ಕೇಳಿದ್ದಾರೆ. ಮೀನು ಹಿಡಿಯುವುದಕ್ಕಾಗಿ ಬಾಂಬ್ ಬಳಕೆ ಮಾಡುವ ಬಗ್ಗೆ ಅವರು ತಿಳಿಸಿದ್ದು, ಕಾಡಿನಲ್ಲಿ ಅಡಗಿಸಿದ್ದ ಬಾಂಬ್’ಗಳನ್ನು ಪೊಲೀಸರಿಗೆ ಕಾಣಿಸಿದ್ದಾರೆ.
ತುಮಕೂರಿನ ಬಳಿ ಕಾರಿನಲ್ಲಿ ಬಾಂಬ್ ಸ್ಪೋಟಕ್ಕೂ ಮುನ್ನ ಒಂದು ಬಾಂಬ್’ನ್ನು ಕಾರಿನ ಚಾಲಕ ಪ್ರವೀಣ ಅವರು ಕಸಿದು ಎಸೆದಿದ್ದಾರೆ. ಅದಾದ ನಂತರ ರಮ್ಯಾ ಹಾಗೂ ಪ್ರವೀಣ ಅವರು ಕಾರಿನಿಂದ ಹಾರಿ ಜೀವ ಉಳಿಸಿಕೊಂಡಿದ್ದು, ಕಾರಿನ ಒಳಗಿದ್ದ ನಾಗೇಂದ್ರ ಗೌಡ ಅವರು ಬಾಂಬ್ ಸಿಡಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ. ಈ ಪ್ರಕರಣದ ಅಂಗವಾಗಿ ಜಿಲ್ಲೆಯ ಎಲ್ಲಾ ಕಡೆ ಶೋಧ ಮುಂದುವರೆದಿದ್ದು, ಅಂಕೋಲಾದ ಅಗಸೂರಿನ ಬಳಿ ಮೂರು ಸಜೀವ ನಾಡಬಾಂಬ್ ದೊರೆತಿದೆ. ನಾಗೇಂದ್ರ ಗೌಡ ಅವರ ಬಳಿ ಇನ್ನೂ ಎಷ್ಟು ಬಾಂಬ್ ಇದ್ದವು? ಅವರಿಗೆ ಅದನ್ನು ಪೂರೈಸಿದವರು ಯಾರು? ಅದನ್ನು ಅವರು ಮತ್ತೆ ಎಲ್ಲಿಯಾದರೂ ಅಡಗಿಸಿದ್ದಾರೆಯಾ? ಎನ್ನುವುದರ ಬಗ್ಗೆಯೂ ಶೋಧ ನಡೆದಿದೆ.
ಬಾಂಬ್ ತಯಾರಿಕೆ ಆರೋಪದಡಿ ಹೊನ್ನಾವರ ತಾಲೂಕಿನ ಚಂದಾವರದ ಜಾರ್ಜ ಫರ್ನಾಂಡೀಸ್ (63) ಎಂಬಾತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಜಾರ್ಜ ಫರ್ನಾಂಡಿಸ್ ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ತನಿಖೆಗೆ ತಡವಾಗುತ್ತಿದೆ. ಚಾರ್ಜ ಫರ್ನಾಂಡಿಸ್ ಅವರ ಹೇಳಿಕೆಗಳು ಈ ಪ್ರಕರಣದ ಸ್ವರೂಪ ಬದಲಿಸುವ ಸಾಧ್ಯತೆಯಿದ್ದು, ಮಹತ್ವದ ಮಾಹಿತಿ ಕೊಡಲಿದೆ.