ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಬಡಕಾಣಶಿಡಾ ಗ್ರಾಮ ಪಂಚಾಯಿತ ಬಳಿಯ ಸಾಕ್ಷಾಳಿ ಸಮೀಪದ ಬಡಕಾಣಶಿಡಾ – ಸಾಕ್ಷಾಳಿ ಸಂಪರ್ಕ ಸೇತುವೆ ಮಳೆಗೆ ಮುರಿದಿದೆ.
ಈ ಸೇತುವೆಯ ಒಂದು ಭಾಗ ಕಡಿತಕ್ಕೆ ಒಳಗಾಗಿರುವುದರಿಂದ ಜನರ ಆತಂಕ ಹೆಚ್ಚಾಗಿದೆ. ಆ ಭಾಗದ ವಾಹನ ಸಂಚಾರಕ್ಕೂ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಸಂಜೆ ವೇಳೆ ಈ ದುರಂತ ನಡೆದಿದ್ದು, ಸೇತುವೆ ಮೇಲೆ ಪಾದಚಾರಿಗಳು ಸಂಚರಿಸಲು ಹೆದರುತ್ತಿದ್ದಾರೆ. ಸೇತುವೆ ಈಗಾಗಲೇ ದುರ್ಬಲವಾಗಿದ್ದು, ಮತ್ತೊಂದು ಭಾರೀ ಮಳೆಗೆ ಇಡೀ ಸೇತುವೆ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಸೇತುವೆ ಸಂಪೂರ್ಣವಾಗಿ ನಾಶವಾದರೆ, ಬಡಕಾನಶಿರಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಕಡಿತವಾಗಲಿದೆ. ಹೀಗಾಗಿ ಸಮಸ್ಯೆ ಆಗುವ ಮುನ್ನ ಅಧಿಕಾರಿಗಳು ಭೇಟಿ ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ. `ಹಾನಿಗೊಳಗಾದ ಸೇತುವೆಯನ್ನು ಶೀಘ್ರವಾಗಿ ದುರಸ್ತಿಪಡಿಸಬೇಕು. ಅಥವಾ ಕೂಡಲೇ ಪುನಃ ನಿರ್ಮಾಣ ಮಾಡಬೇಕು’ ಎಂದು ಅಲ್ಲಿನ ರಮೇಶ ನಾಯ್ಕ ಅವರು ಆಗ್ರಹಿಸಿದ್ದಾರೆ.