ಉತ್ತಮ ಹೂಡಿಕೆ ಬಗ್ಗೆ ಫೇಸ್‌ಬುಕ್ ಮೂಲಕ ಕಾಣಿಸಿದ ಜಾಹೀರಾತು ನೋಡಿದ ಕಮಲಾಕ್ಷ ಭಟ್ಟ ಅವರು ಅಲ್ಲಿ 53 ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಎರಡು ತಿಂಗಳು ಕಳೆದರೂ ಅವರ ಹೂಡಿಕೆಗೆ ಲಾಭವೂ ಸಿಕ್ಕಿಲ್ಲ. ಹೂಡಿಕೆ ಮಾಡಿದ ಹಣವೂ ಮರಳಿ ಬಂದಿಲ್ಲ!
ಅoಕೋಲಾ ಅವರ್ಸಾ ಮಠಾಕೇರಿಯಲ್ಲಿ ಕಮಲಾಕ್ಷ ಆಪಾ ಭಟ್ಟ (52) ಅವರು ವಾಸವಾಗಿದ್ದಾರೆ. ವ್ಯಾಪಾರ-ವ್ಯವಹಾರ ಮಾಡಿಕೊಂಡಿರುವ ಅವರು ಏಪ್ರಿಲ್ 1ರಂದು ಫೇಸ್‌ಬುಕ್ ಬಳಸುತ್ತಿದ್ದ ವೇಳೆ ಟ್ರೇಡಿಂಗ್ ಕಂಪನಿಯೊAದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುವ ವಿಷಯ ಗೊತ್ತಾಗಿದೆ. ನಕಲಿ ಜಾಹೀರಾತು ನೋಡಿದ ಅವರು ಲಿಂಕ್ ಕ್ಲಿಕ್ಕಿಸಿ ಅಲ್ಲಿದ್ದ ಗೂಗಲ್ ಫಾರ್ಮ ಭರ್ತಿ ಮಾಡಿದ್ದಾರೆ. ಅದಾದ ನಂತರ ಅವರಿಗೆ ನಿಖಿತಾ ಎಂಬಾತರು ಫೋನ್ ಮಾಡಿ ಪುಸಲಾಯಿಸಿದ್ದಾರೆ.
ಆ ಮಹಿಳೆ ಫೋನ್ ಮಾಡಿ ಟ್ರೇಡಿಂಗ್ ಕಂಪನಿಯಲ್ಲಿ ಖಾತೆ ತೆರೆದಿರುವುದಾಗಿ ತಿಳಿಸಿದ್ದು, ಅದಾದ ನಂತರ ಸೈಯದ್ ಎಂಬಾತರ ಪರಿಚಯವಾಗಿದೆ. ಅಕೌಂಟ್ ಮ್ಯಾನೇಜರ್ ಎಂದು ಹೇಳಿದ ಸಯ್ಯದ್ ಅವರು ವಿವಿಧ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಹೇಳಿದ್ದಾರೆ. ಕಮಲಾಕ್ಷ ಭಟ್ಟ ಅವರು ಮೊದಲು 19908ರೂ ಜಮಾ ಮಾಡಿದ್ದಾರೆ. ಅದಾದ ನಂತರ ಅಶುತೋಷ್ ಎಂಬ ಮತ್ತೊಬ್ಬರು ಫೋನ್ ಮಾಡಿ, ತಮ್ಮಲ್ಲಿ ಹಣ ಹೂಡಿದರೆ ಇನ್ನೂ ಹೆಚ್ಚು ಲಾಭ ಕೊಡಿಸುವುದಾಗಿ ಹೇಳಿದ್ದಾರೆ.
ಇದನ್ನು ನಂಬಿದ ಕಮಲಾಕ್ಷ ಭಟ್ ಏಪ್ರಿಲ್ 3ರಿಂದ ಮೇ 18ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 53,19,908 ರೂ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಮೊತ್ತ ಮರಳಿ ಬಂದಿಲ್ಲ. ಲಾಭವೂ ಸಿಕ್ಕಿಲ್ಲ.