15 ನಿಮಿಷದೊಳಗೆ ಆಂಬುಲೆನ್ಸ್ ಬಾರದಿದ್ದರೆ 5 ಸಾವಿರ ರೂ ದಂಡ ವಿಧಿಸುವುದಾಗಿ ಆರೋಗ್ಯ ಸಚಿವ ಯು ಟಿ ಖಾದರ್ ಅವರು ಹೇಳಿದ್ದು, ಈ ನಡುವೆ ಅಂಕೋಲಾದಲ್ಲಿ ತುರ್ತು ಸಮಯದಲ್ಲಿ ಆಂಬುಲೆನ್ಸ್ ಸಿಗದೇ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲಿದ ಬೊಬ್ರುವಾಡದ ಗೋವಿಂದ ನಾಯ್ಕ ಅವರು ಮೂರು ತಾಸು ಕಾದರೂ ಆಂಬುಲೆನ್ಸ್ ಸಿಗದೇ ಕೊನೆಯುಸಿರೆಳೆದಿದ್ದಾರೆ.
ಅಂಕೋಲಾದ ಬೊಬ್ರುವಾಡದಲ್ಲಿ ಗೋವಿಂದ ನಾಯ್ಕ ಅವರು ವಾಸವಾಗಿದ್ದರು. 76 ವರ್ಷದ ಅವರು ಆರೋಗ್ಯವಾಗಿಯೇ ಇದ್ದರು. ಜುಲೈ 28ರಂದು ದಿಢೀರ್ ಆಗಿ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಸಂಜೆ 6 ಗಂಟೆಗೆ ಕುಟುಂಬದವರು ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆತಂದರು. ಅಲ್ಲಿದ್ದ ವೈದ್ಯರು `ತಕ್ಷಣ ಅವರನ್ನು ಕಿಮ್ಸ್’ಗೆ ಕರೆದೊಯ್ಯಬೇಕು’ ಎಂದು ಸೂಚಿಸಿದರು. ಅಂಕೋಲಾ ಆಸ್ಪತ್ರೆಯಲ್ಲಿ ಮೂರು ಆಂಬುಲೆನ್ಸ್ ಇದ್ದರೂ ಅದು ಗೋವಿಂದ ನಾಯ್ಕ ಅವರ ಸೇವೆಗೆ ಸಿಗಲಿಲ್ಲ. ಒಂದು ಆಂಬುಲೆನ್ಸ್ ಗಂಗಾವಳಿ ಕಡೆ ಹೋಗಿದ್ದು, ಮತ್ತೆರಡು ಆಂಬುಲೆನ್ಸಿಗೆ ಚಾಲಕರಿರಲಿಲ್ಲ. ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆತರುವ `ನಗು-ಮಗು’ ಆಂಬುಲೆನ್ಸ್ ಬಳಕೆ ಸಹ ಸಾಧ್ಯವಾಗಲಿಲ್ಲ.
ಗಂಗಾವಳಿ ಕಡೆಗೆ ಹೋಗಿದ್ದ ಆಂಬುಲೆನ್ಸ್ ಬರುವವರೆಗೆ ಗೋವಿಂದ ನಾಯ್ಕ ಕುಟುಂಬದವರು ಕಾದರು. ಉಸಿರಾಟ ಸಮಸ್ಯೆಯಿರುವ ಕಾರಣ ಅವರಿಗೆ ಆಕ್ಸಿಜನ್ ಅಳವಡಿಸಿದ್ದರಿಂದ ಕಾರಿನಲ್ಲಿ ಸಾಗಿಸಲು ಸಾಧ್ಯವಾಗುವ ಹಾಗಿರಲಿಲ್ಲ. ರಾತ್ರಿ 9ಗಂಟೆಯಾದರೂ ಆಂಬುಲೆನ್ಸ್ ಬರಲಿಲ್ಲ. ಮೂರು ತಾಸು ಕಳೆದರೂ ಆಂಬುಲೆನ್ಸ್ ಸಿಗದ ಕಾರಣ ತುರ್ತು ಚಿಕಿತ್ಸೆ ನಡೆಯಲಿಲ್ಲ. ಈ ವೇಳೆ ಗೋವಿಂದ ನಾಯ್ಕ ಅವರಿಗೆ ಹೃದಯಘಾತವಾಗಿದ್ದು, ಅವರು ಅಲ್ಲಿಯೇ ಕೊನೆಯುಸಿರೆಳೆದರು.
`ಆಂಬುಲೆನ್ಸ್ ಸಿಗದ ಕಾರಣ ತಂದೆಯನ್ನು ಕಳೆದುಕೊಂಡಿದ್ದು, ಇಂಥ ಪರಿಸ್ಥಿತಿ ಯಾರಿಗೂ ಬರಬಾರದು. ಮೂರು ತಾಸು ಸುಮ್ಮನೆ ಮಲಗಿಸುವ ಬದಲು ಅರ್ದತಾಸಿನಲ್ಲಿ ಕಾರವಾರ ತಲುಪಿದ್ದರೆ ಅವರು ಬದುಕುತ್ತಿದ್ದರು’ ಎಂದು ಅವರ ಪುತ್ರ ಶ್ರೀಧರ ನಾಯ್ಕ ಅವರು ಅಳಲು ತೋಡಿಕೊಂಡರು. `ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಇರುವ ಆಸ್ಪತ್ರೆಗಳಲ್ಲೂ ಸರಿಯಾದ ಸೌಲಭ್ಯಗಳಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದರು.