ದಾಂಡೇಲಿಯ ಜಿ ಎನ್ ರಸ್ತೆಯಲ್ಲಿ ಮಾರಾಮಾರಿ ನಡೆದಿದೆ. ಯುವಕನೊಬ್ಬನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ದಾಂಡೇಲಿ ನಗರದ ಜೆ ಎನ್ ರಸ್ತೆಯ ಮೆಡ್ ಪ್ಲಸ್ ಮೆಡಿಕಲ್ ಬಳಿ ಸೋಮವಾರ ಸಂಜೆ ದಿಢೀರ್ ಆಗಿ ಗಲಾಟೆ ಶುರುವಾಗಿದೆ. ಮೂವರು ಅಪರಿಚಿತರು ಯುವಕನೊಬ್ಬನ ಮೇಲೆ ಆಕ್ರಮಣ ಮಾಡಿ, ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂವರು ಸೇರಿ ಅತ್ಯಂತ ಕೆಟ್ಟ ಶಬ್ದಗಳಿಂದ ನಿಂದಿಸಿ ಒಬ್ಬರಿಗೆ ಹೊಡೆದಿದ್ದಾರೆ.
ಮೂವರು ಗುಂಪು ಕಟ್ಟಿಕೊಂಡು ಬಂದಿದ್ದು, ಅದನ್ನು ನೋಡಿದ ಯುವಕ ಓಡುವ ಪ್ರಯತ್ನ ಮಾಡಿದ್ದಾರೆ. ಅದಾಗಿಯೂ, ಆ ಮೂವರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಇದರಿಂದ ಯುವಕ ಗಾಯಗೊಂಡಿದ್ದು, ಆ ಯುವಕ ಜೀವ ಉಳಿಸಿಕೊಳ್ಳುವುದಕ್ಕಾಗಿ ಅಲ್ಲಿಂದ ಓಡಿದ್ದಾರೆ. ಅದಾದ ನಂತರ ಆ ಮೂವರು ಆಘಂತುಕರು ಸಹ ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆ ಮಾಡಿದವರು ಯಾರು? ಹಲ್ಲೆಗೆ ಒಳಗಾದವರು ಯಾರು? ಯಾವ ಕಾರಣಕ್ಕೆ ಈ ದಾಳಿ ನಡೆಯಿತು? ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.