ದಾಂಡೇಲಿಯ ನ್ಯಾಯವಾದಿ ಜಯಾ ನಾಯ್ಕ ಅವರಿಗೆ ಅವಮಾನ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆಯವರು ನ್ಯಾಯಾಲಯದಲ್ಲಿ ಅವರಿಗೆ ಕ್ಷಮೆ ಕೋರಿದ್ದಾರೆ. ಗುಂಡಾಗಿರಿ ಪ್ರದರ್ಶಿಸಿದ್ದ ಮತ್ತೆ ಮೂವರು ಸಹ ಕ್ಷಮೆ ಕೊರಿದ್ದು, ರಾಜಿಸೂತ್ರದ ಮೂಲಕ ಈ ಪ್ರಕರಣ ಮುಕ್ತಾಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಜಯಾ ಡಿ ನಾಯ್ಕ ಅವರು ನ್ಯಾಯವಾದಿಯಾಗಿದ್ದಾರೆ. ನೊಂದವರಿಗೆ ನೆರವು ನೀಡುತ್ತಿರುವ ಅವರು ತಮ್ಮ ಕಚೇರಿ ಬಳಿ ನಾಮಫಲಕವನ್ನು ಅಳವಡಿಸಿದ್ದಾರೆ. 2024ರ ಜನವರಿಯಲ್ಲಿ ದಾಂಡೇಲಿ ಜೆ ಎನ್ ರಸ್ತೆಯಲ್ಲಿರುವ ಇಂಗ್ಲಿಷ್ ನಾಮಫಲಕ ಕೀಳಲು ರಕ್ಷಣಾ ವೇದಿಕೆಯವರು ನಿರ್ಧರಿಸಿದ್ದರು. ಶೆಟ್ಟಿ ಲಂಚ್ ಹೋಂ ಪಕ್ಕದಲ್ಲಿ ಇದ್ದ ವಕೀಲೆ ಜಯಾ ನಾಯ್ಕ ಅವರ ಕಚೇರಿ ನಾಮಫಲಕವನ್ನು ಕರವೇ ಪದಾಧಿಕಾರಿಗಳು ಕಿತ್ತು ಹಾಕಿದ್ದರು. `ಆ ನಾಮಫಲಕ ಕನ್ನಡದಲ್ಲಿ ಇಲ್ಲ’ ಎಂದು ಸಂಘಟನೆಯವರು ದೂರಿದ್ದರು. ಆದರೆ, ನಾಮಫಲಕ ಕನ್ನಡದಲ್ಲಿಯೇ ಇದಿದ್ದನ್ನು ಜಯಾ ನಾಯ್ಕ ಅವರು ಸಾಭೀತು ಮಾಡಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ದಾಂಡೇಲಿ ಅಧ್ಯಕ್ಷ ಸಾದಿಕ್ ಮುಲ್ಲಾ ಅವರ ವಿರುದ್ಧ ಜಯಾ ನಾಯ್ಕ ಅವರು ಕಾನೂನು ಹೋರಾಟ ಶುರು ಮಾಡಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರಾಗಿ ಕನ್ನಡ ನಾಮಫಲಕ ಕಿತ್ತೆಸೆದ ಬಗ್ಗೆ ಅವರು ಸಿಡಿಮಿಡಿಗೊಂಡಿದ್ದರು. ಈ ಬಗ್ಗೆ ವಕೀಲರು ಪೊಲೀಸ್ ದೂರು ನೀಡುವ ಪ್ರಯತ್ನ ನಡೆಸಿದ್ದು, ಅದು ಫಲ ಕೊಟ್ಟಿರಲಿಲ್ಲ. ನಾಮಫಲಕ ಕಿತ್ತ ವಿಡಿಯೋ ದಾಖಲೆ ಆಧಾರದಲ್ಲಿ ಜಯಾ ನಾಯ್ಕ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕನ್ನಡ ಸಂಘಟನೆಯವರೇ ಕನ್ನಡ ನಾಮಫಲಕ ಕಿತ್ತೆಸೆದ ವಿಷಯವನ್ನು ಅವರು ನ್ಯಾಯಾಧೀಶರ ಮುಂದೆ ವಿವರಿಸಿದ್ದರು. ಅಂದಿನ ನ್ಯಾಯಾಧೀಶೆ ರೋಹಿಣಿ ಬಸಾಪುರ ಅವರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆಗೆ ಆದೇಶ ನೀಡಿದ್ದರು. ಎರಡುವರೆ ವರ್ಷಗಳ ನಂತರ ಈ ಪ್ರಕರಣ ರಾಜಿಯಲ್ಲಿ ಅಂತ್ಯವಾಯಿತು. ಲೋಕ್ ಅದಾಲತ್ ಅವಧಿಯಲ್ಲಿ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಅವರ ಎದುರು ಕರವೇ ಅಧ್ಯಕ್ಷ ಸಾದಿಕ ಮುಲ್ಲಾ ಹಾಗೂ ಇತರರು ಕ್ಷಮೆ ಕೋರಿದರು. ಸರ್ಕಾರಿ ಅಭಿಯೋಜಕ ರಮೇಶ್ ಬಂಕಾಪುರ, ವಕೀಲ ರಾಘವೇಂದ್ರ ಗಡೆಪ್ಪ, ಕೋರ್ಟ ಸಿಬ್ಬಂದಿ ಸುಭಾಷ್, ರಾಹುಲ್ ಮಡಿವಾಳ ಇತರರು ಈ ಘಟನೆಗೆ ಸಾಕ್ಷಿಯಾದರು.