`ಕೈಗಾ ಅಣು ವಿದ್ಯುತ್ ಘಟಕದಲ್ಲಿ ಸ್ಥಳೀಯರಿಗೆ ಕೆಲಸ ಕೊಡಬೇಕು’ ಎಂದು ಮಲ್ಲಾಪುರದ ಅಂಬ್ರಿಷ್ ಬಾಂದೇಕರ್ ಅವರು ಪಟ್ಟು ಹಿಡಿದಿದ್ದಾರೆ. ಕೈಗಾದಲ್ಲಿ 5 & 6ನೇ ಘಟಕ ನಿರ್ಮಾಣ ಮಾಡುತ್ತಿರುವ ಮೇಗಾ ಇಂಜಿನಿಯರಿoಗ್ ಕಂಪನಿ ಅಧಿಕಾರಿಯೊಬ್ಬರು ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಮಲ್ಲಾಪುರದ ಹಿಂದೂವಾಡದಲ್ಲಿ ಅಂಬ್ರಿಷ್ ಬಾಂದೇಕರ್ ಅವರು ವಾಸವಾಗಿದ್ದಾರೆ. ಅವರು ಕೈಗಾ ಅಣು ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅದರೊಂದಿಗೆ ಗುತ್ತಿಗೆ ಕೆಲಸ ಹಾಗೂ ವಾಹನಗಳ ಹಂಚಿಕೆ ವಿಚಾರದಲ್ಲಿ ತಾನು ಹೇಳಿದಂತೆಯೇ ಕೇಳಬೇಕು ಎಂದು ಹಠ ಹಿಡಿದಿದ್ದಾರೆ. ಈ ಬಗ್ಗೆ ಮೇಗಾ ಇಂಜಿನಿಯರಿAಗ್ ಕಂಪನಿಯ ಮೆಕಾನಿಕಲ್ ಮ್ಯಾನೇಜರ್ ವೆಂಕಟನಾಯಿಡು ಅವರನ್ನು ಸಂಪರ್ಕಿಸಿದ್ದಾರೆ. ವೆಂಕಟನಾಯಿಡು ಅವರು ಅಂಬ್ರಿಷ್ ಬಾಂದೇಕರ್ ಅವರ ಮಾತಿಗೆ ಬೆಲೆ ಕೊಟ್ಟಿಲ್ಲ. ಇದರಿಂದ ಸಿಟ್ಟಾದ ಅಂಬ್ರಿಷ್ ಬಾಂದೇಕರ್ ಅವರು ಅಲ್ಲಿ ಕೂಗಾಡಿದ್ದಾರೆ.
ಜೂನ್ 27ರಂದು ಬೆಳಿಗ್ಗೆ ಕಂಪನಿಯ ಕಚೇರಿಗೆ ಅಂಬ್ರಿಷ್ ಬಾಂದೇಕರ್ ಅವರು ನುಗ್ಗಿ ದಾಂದಲೆ ಮಾಡಿದ ಬಗ್ಗೆ ವೆಂಕಟನಾಯಿಡು ಅವರು ದೂರಿದ್ದಾರೆ. `ನೀವೆಲ್ಲ ಹೊರ ರಾಜ್ಯದಿಂದ ಬಂದವರು, ಇಲ್ಲಿ ನನ್ನ ಅಣತಿಯಂತೆಯೇ ನಡೆಯಬೇಕು’ ಎಂದು ಅಂಬ್ರಿಷ್ ಬಾಂದೇಕರ್ ಹೇಳಿದ ಬಗ್ಗೆ ಅವರು ಆರೋಪಿಸಿದ್ದಾರೆ. ವೆಂಕಟನಾಯಿಡು ನೀಡಿದ ದೂರಿನ ಅನ್ವಯ ಮಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.