ಗೋವಾದ ವೈದ್ಯ ಡಾ ಸತೀಶ ಕುಡ್ಚಲಕರ್ ಅವರ ಮಗ ಸಂಜೀಲ ಕುಡ್ಚಲಕರ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಕಾರವಾರದಲ್ಲಿ ಸಂಜೀಲ ಕುಡ್ಚಲಕರ್ ಅವರನ್ನು ರಕ್ಷಿಸಲಾಗಿದ್ದು, ಅಪಹರಣಕಾರರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಡಾ ಸತೀಶ ಕುಡ್ಚಲಕರ್ ಅವರು ಗೋವಾದ ಮಡಗಾಂವಿನಲ್ಲಿ ವೈದ್ಯಕೀಯ ಸೇವೆಯಲ್ಲಿದ್ದಾರೆ. ಅವರನ್ನು ಬೆದರಿಸುವುದಕ್ಕಾಗಿ ಗೋವಾದ ಸಶೀಲ್ ಮಕ್ಸೂದ್ ಹಾಗೂ ಷಾ ಅಲಿ ಸೌದಾಗರ್ ಎಂಬಾತರು ಅವರ ಪುತ್ರ ಸಂಜೀಲ ಅವರನ್ನು ಅಪಹರಿಸಿದ್ದಾರೆ. ಅಪಹರಣದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೇ ಆಧಾರದಲ್ಲಿ ದಕ್ಷಿಣ ಗೋವಾದ ಪೊಲೀಸರು ತನಿಖೆ ನಡೆಸಿದ್ದಾರೆ. ಆ ತನಿಖೆಯಲ್ಲಿ ಸಂಜೀವ ಕುಡ್ಚಲಕರ್ ಅವರು ಕಾರವಾರದಲ್ಲಿರುವುದು ಗೊತ್ತಾಗಿದ್ದು, ಇಲ್ಲಿನ ಪೊಲೀಸರ ಸಹಾಯದಿಂದ ವೈದ್ಯರ ಪುತ್ರರನ್ನು ರಕ್ಷಿಸಲಾಗಿದೆ.
`ಅಪಹರಣಕಾರರು ಸಂಜೀಲ ಅವರನ್ನು ಕಾರಿನಲ್ಲಿ ಅಪಹರಿಸಿದ್ದರು. ಅವರ ಅಪಹರಣಕ್ಕೆ ಮತ್ತೊಬ್ಬರು ಸುಪಾರಿ ನೀಡಿದ ಶಂಕೆಯಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಡಾ ಸತೀಶ ಕುಡ್ಚಲಕರ್ ಅವರ ಮೊದಲ ಪತ್ನಿ ಈ ಅಪಹರಣ ಹಗರಣದಲ್ಲಿ ಭಾಗಿಯಾದ ಅನುಮಾನಗಳಿವೆ. ಹೀಗಾಗಿ ಅವರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಪಹರಣಕಾರರನ್ನು ಬಂಧಿಸುವಲ್ಲಿ ಹಾಗೂ ಸಂಜೀಲ ಕುಡ್ಚಲಕರ್ ಅವರ ರಕ್ಷಣೆಗೆ ಕಾರವಾರ ಪೊಲೀಸರು ನೆರವು ನೀಡಿದ್ದಾರೆ.